ರಾಜ್ಯ

ರೌಡಿ, ಕೊಲೆಗಡುಕರಿಗೆ ರತ್ನಗಂಬಳಿ ಹಾಸಿ, ಸನ್ಮಾನಿಸಿದ್ದರ ಫಲ; ಸ್ಯಾಂಟ್ರೋ ರವಿ ಹೇಳುವ ವರ್ಗಾವಣೆ ಮಾಡಿಸಲಷ್ಟೇ ಅರಗ ಶಕ್ತ: ಸಿದ್ದರಾಮಯ್ಯ

Shilpa D

ಬೆಂಗಳೂರು: ನಗರದಲ್ಲಿ ಚಲಿಸುವ ಕಾರಿನಲ್ಲಿ ಕೋರಮಂಗಲದ ಯುವತಿ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಟೀಕಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅರಗ ಜ್ಞಾನೇಂದ್ರ ಸ್ಯಾಂಟ್ರೋ ರವಿ ಹೇಳುವ ವರ್ಗಾವಣೆ ಮಾಡಿಸಲಷ್ಟೇ ಶಕ್ತರು ಎಂದು ಆರೋಪಿಸಿದ್ದಾರೆ.

ಬೆಂಗಳೂರಿನ ಕಗ್ಗಲೀಪುರದ ಬಾಲಕಿಯ ಅತ್ಯಾಚಾರ ಪ್ರಕರಣ ನಡೆದು ವಾರ ಕಳೆದಿಲ್ಲ ಅಷ್ಟರಲ್ಲೇ ಕೋರಮಂಗಲದ ಯುವತಿಯನ್ನು ನಾಲ್ವರು ರಾಕ್ಷಸರು ಅತ್ಯಾಚಾರಗೈದು ಅಟ್ಟಹಾಸ ಮೆರೆದಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಜೀವಂತವಾಗಿದೆ ಎಂಬ ನಂಬಿಕೆಯನ್ನೇ ಜನ ಕಳೆದುಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ತಮ್ಮ ಸರಣಿ ಟ್ವೀಟ್‌ ಮೂಲಕ ಆರೋಪಿಸಿದ್ದಾರೆ.

ದುಷ್ಟರನ್ನು, ಸಮಾಜಘಾತುಕರನ್ನು ಹಿಡಿದು ಸದೆಬಡಿಯಬೇಕಿದ್ದ ರಾಜ್ಯ ಬಿಜೆಪಿ ಸರ್ಕಾರ, ಬದಲಿಗೆ ರೌಡಿ ಶೀಟರ್ ಗಳು, ಕೊಲೆಗಡುಕರನ್ನು ರತ್ನಗಂಬಳಿ ಹಾಸಿ, ಸನ್ಮಾನಿಸಿ ಪಕ್ಷಕ್ಕೆ ಸೇರಿಸಿಕೊಂಡಿದ್ದರ ಫಲವನ್ನು ಜನಸಾಮಾನ್ಯರು ಉಣ್ಣಬೇಕಿದೆ. ರಾಜ್ಯದಲ್ಲಿ ಕುಸಿದಿರುವ ಕಾನೂನು ಸುವ್ಯವಸ್ಥೆ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡಿದಾಗ ಮೈಮೇಲೆ ಕಂಬಳಿಹುಳ ಬಿದ್ದವರಂತೆ ಕುಣಿದಾಡಿ, ಎಗರಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಅಸಾಮರ್ಥ್ಯವೇ ಈ ಎಲ್ಲಾ ದೌರ್ಜನ್ಯಗಳಿಗೆ ಕಾರಣ ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.

ಪೊಲೀಸರಿಗೆ ಮತ್ತೆ ಚಮಕ್ ಕಠಿಣ ಕ್ರಮದ ಭರವಸೆ ನೀಡುವ ಗೃಹಸಚಿವರು ಸ್ಯಾಂಟ್ರೋ ರವಿ ಹೇಳುವ ವರ್ಗಾವಣೆ ಮಾಡಿಸಲಷ್ಟೇ ಶಕ್ತರು ಎಂಬ ಜನರ ಮಾತು ನಿಜವಾಗಿದೆ. ಸಾಮರ್ಥ್ಯ, ನೈತಿಕತೆ ಈ ಯಾವುದೂ ಇಲ್ಲದೆ ಕುರ್ಚಿಗೆ ಅಂಟಿಕೊಂಡು ಕೂತಿರುವ ಅರಗ ಜ್ಞಾನೇಂದ್ರ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ.

ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಅದಕ್ಷತೆಯಿಂದಾಗಿ ರಾಜ್ಯದ ಪೊಲೀಸ್ ಇಲಾಖೆ ಸಂಪೂರ್ಣವಾಗಿ ಹಾದಿ ತಪ್ಪಿದೆ. ಚುನಾವಣಾ ಕಾಲದಲ್ಲಿ ಈ ರೀತಿಯ ಪೊಲೀಸ್ ನಿಷ್ಕ್ರಿಯತೆ ಅಪಾಯಕಾರಿಯಾದುದು. ಆದ್ದರಿಂದ ಚುನಾವಣಾ ಆಯೋಗ ಪೊಲೀಸ್ ಇಲಾಖೆಯ‌ ಕಾರ್ಯನಿರ್ವಹಣೆಯ ಮೇಲೆ ನಿಗಾ ಇಡಬೇಕು ಎಂದು ಮನವಿ‌ ಮಾಡುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

SCROLL FOR NEXT