ರಾಜ್ಯ

ಚಿತ್ರದುರ್ಗ: ಕಾರು–ಲಾರಿ ಮುಖಾಮುಖಿ ಡಿಕ್ಕಿ, ಖ್ಯಾತ ರಂಗಭೂಮಿ ಕಲಾವಿದ ಬೆಳಗಲ್ ವೀರಣ್ಣ ಸಾವು

Srinivasamurthy VN

ಚಳ್ಳಕೆರೆ: ಚಿತ್ರದುರ್ಗದಲ್ಲಿ ಕಾರು–ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಖ್ಯಾತ ರಂಗಭೂಮಿ ಕಲಾವಿದ ಬೆಳಗಲ್ ವೀರಣ್ಣ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ವ್ಯಾಪ್ತಿಯಲ್ಲಿ  ಭಾನುವಾರ ಬೆಳಿಗ್ಗೆ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ರಂಗಭೂಮಿ ಹಾಗೂ ತೊಗಲು ಗೊಂಬೆಯಾಟದ ಹಿರಿಯ ಕಲಾವಿದ ಬೆಳಗಲ್ ವೀರಣ್ಣ ಸಾವಿಗೀಡಾಗಿದ್ದಾರೆ. ಬಳ್ಳಾರಿ ಮೂಲದವರಾದ ವೀರಣ್ಣ ಅವರು ಪುತ್ರ ಹನುಮಂತ ಅವರೊಂದಿಗೆ ಬೆಳಿಗ್ಗೆ ಬೆಂಗಳೂರಿಗೆ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವೀರಣ್ಣ ಅವರನ್ನು ಚಳ್ಳಕೆರೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಮಾರ್ಗ ಮಧ್ಯೆ ಸಾವಿಗೀಡಾಗಿದ್ದರು. ವೀರಣ್ಣ ಅವರ ಜೊತೆಗಿದ್ದ ಪುತ್ರ ಹನುಮಂತ ಅವರು ತೀವ್ರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ಬೆಳಗಲ್ ವೀರಣ್ಣ (91) ಅವರು ಹಂಪಿ ಕನ್ನಡ ವಿವಿಯ ನಾಡೋಜ, ಕರ್ನಾಟಕ ರಾಜ್ಯೋತ್ಸವ‌, ಜಾನಪದ ಅಕಾಡೆಮಿ ಮತ್ತಿತರ ಪ್ರಶಸ್ತಿಗಳಿಂದ  ಪುರಸ್ಕೃತರಾಗಿದ್ದಾರೆ. ಜತೆಗೆ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.  ತೊಗಲು ಗೊಂಬೆಯಾಟವನ್ನು ದೇಶ- ವಿದೇಶಗಳಲ್ಲಿ ಪ್ರಖ್ಯಾತಪಡಿಸಿದ್ದ ವೀರಣ್ಞ, ಖ್ಯಾತ ಸಂಗೀತ ಕಲಾವಿದ ಪಂಡಿತ್ ವೆಂಕಟೇಶಕುಮಾರ್ ಅವರ ಮಾವ.
 

SCROLL FOR NEXT