ರಾಜ್ಯ

ವೋಟರ್ ಐಡಿ ಪಡೆಯಲು ಬಿಬಿಎಂಪಿ ಸ್ಥಾಪಿಸಿದ 'ರಿಜಿಸ್ಟ್ರೇಷನ್ ಕ್ಯಾಂಪ್'ಗೆ ಕಾಲೇಜು ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ

Manjula VN

ಬೆಂಗಳೂರು: ಮೊದಲ ಬಾರಿಗೆ ಮತದಾರರನ್ನು ಪ್ರೇರೇಪಿಸುವ ಸಲುವಾಗಿ ಕಾಲೇಜುಗಳಲ್ಲಿ ಬಿಬಿಎಂಪಿ ಆರಂಭಿಸಿದ್ದ ನೋಂದಣಿ ಶಿಬಿರಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ನೋಂದಣಿ ಶಿಬಿರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ ವಿದ್ಯಾರ್ಥಿಗಳು, ಮತದಾರರ ಚೀಟಿಗಾಗಿ ಅರ್ಜಿ ಸಲ್ಲಿಸಿದರು.

ಚುನಾವಣಾ ಆಯೋಗದ ಸೂಚನೆಯಂತೆ ಕಳೆದ ಮಾರ್ಚ್ ತಿಂಗಳಿನಲ್ಲಿ ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಲು ಅರ್ಹತೆ ಪಡೆದವರ ಪ್ರೋತ್ಸಾಹಿಸಲು ಹಾಗೂ ಅವರಿಗೆ ಮತದಾರರ ಗುರುತಿನ ಚೀಟಿ ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಶಿಬಿರಗಳನ್ನು ಸ್ಥಾಪಿಸಿದೆ. ಇದಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಜೈನ್ ವಿಶ್ವವಿದ್ಯಾನಿಲಯದ ಪ್ರಥಮ ವರ್ಷದ ವಿದ್ಯಾರ್ಥಿನಿ ಅತಿಕಾ ಜೈನಾಬ್ ಅವರು ಮಾತನಾಡಿ, ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದೇನೆಂದು ಸಂತಸ ವ್ಯಕ್ತಪಡಿಸಿದ್ದಾರೆ.

ಮಾಸ್ಟರ್ ಇನ್ ಕಂಪ್ಯೂಟರ್ ಅಪ್ಲಿಕೇಷನ್ (ಎಂಸಿಎ) ವಿದ್ಯಾರ್ಥಿನಿ ರಾಗಿಣಿ ಅಯ್ಯಣ್ಣ (21), ಸಾಂಕ್ರಾಮಿಕ ರೋಗ ಸಮಯದಲ್ಲಿ ಮತದಾರರ ಗುರುತಿನ ಚೀಟಿಯನ್ನು ಪಡೆದುಕೊಂಡಿದ್ದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡಲಿದ್ದೇನೆ. ಮತದಾನ ನಮ್ಮ ಹಕ್ಕು ಮತ್ತು ನಾವು ನಮ್ಮ ಹಕ್ಕು ಚಲಾಯಿಸಬೇಕು ಎಂದು ಹೇಳಿದ್ದಾರೆ.

ನಿಮ್ಮ ಮತವನ್ನು ಯಾರಿಗೆ ನೀಡಬೇಕೆಂಬುದನ್ನು ಯಾವ ರೀತಿಯಲ್ಲಿ ನಿರ್ಧರಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಅಭ್ಯರ್ಥಿಯ ಮೇಲೆ ಅವಲಂಬಿಸಿರುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಶಿಕ್ಷಣದ ಖಾಸಗೀಕರಣವನ್ನು ಉತ್ತೇಜಿಸುವ ಸಲುವಾಗಿ ಜಾರಿಗೆ ತರಲು ಮುಂದಾಗಿರುವ ಹೊಸ ಶಿಕ್ಷಣ ನೀತಿಯನ್ನು (ಎನ್‌ಇಪಿ) ಸರ್ಕಾರ ಹಿಂಪಡೆಯಬೇಕು ಎಂದು ಎಂದು ರಾಗಿಣಿ ಒತ್ತಾಯಿಸಿದ್ದಾರೆ.

ಹಾಸ್ಟೆಲ್‌ಗಳಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ, ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು, ಕಳಪೆ ಗುಣಮಟ್ಟದ ಆಹಾರವನ್ನು ಕೂಡ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ಸುಧಾರಿಸಬೇಕು. ಸಂಶೋಧನೆಗಾಗಿ ವಿದ್ಯಾರ್ಥಿಗಳ ಸ್ಟೈಫಂಡ್ ಮೊತ್ತವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಗಾರ್ಡನ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಅರ್ಜುನ್ ಚೋಪ್ರಾ ಅವರು ಮಾತನಾಡಿ, ನನ್ನ ಸಾಕಷ್ಟು ಸಹಪಾಠಿಗಳು ತಮ್ಮ ಮತದಾರರ ಗುರುತಿನ ಚೀಟಿ ಪಡೆಯಲು ಆನ್‌ಲೈನ್ ಅಥವಾ ಶಿಬಿರಗಳ ಮೂಲಕ ನೋಂದಾಯಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ರಾಜಕೀಯದ ಬಗ್ಗೆ ಅರಿವಿದ್ದರೂ ಕೂಡ ಸಾಕಷ್ಟು ವಿದ್ಯಾರ್ಥಿಗಳು ಮತದಾನದ ಕುರಿತು ಒಲವು ತೋರುತ್ತಿಲ್ಲ. ವಿದ್ಯಾರ್ಥಿಗಳು ಹೆಚ್ಚು ಜಾಗೃತರಾಗಿರಬೇಕಿದ್ದು, ಮತ ಚಲಾಯಿಸಿದಾಗ ಮಾತ್ರ ಸರ್ಕಾರವನ್ನು ಪ್ರಶ್ನಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.

SCROLL FOR NEXT