ರಾಜ್ಯ

ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೂ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬಹುದು: ಹೈಕೋರ್ಟ್

Manjula VN

ಬೆಂಗಳೂರು: ಚುನಾವಣೆಗಳಿಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೂ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುವುದಕ್ಕೆ ಅವಕಾಶವಿದೆ ಎಂದು ಹೈಕೋರ್ಟ್​ ಗುರುವಾರ ಹೇಳಿದೆ.

ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿದ್ದ ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿ ಬೆಂಗಳೂರಿನ ಶಿವಾಜಿನರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅಹರ್ಷದ್ ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿದರು.

ಈ ವೇಳೆ ಚುನಾವಣೆಗಳಿಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೂ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುವುದಕ್ಕೆ ಅವಕಾಶವಿದೆ ಎಂದು ಹೇಳಿತು. ಅಲ್ಲದೇ, ಶಾಸಕರ ಹೆಸರನ್ನೇ ಪಟ್ಟಿಯಿಂದ ತೆಗೆದು ಹಾಕುವ ಪ್ರಸಂಗಗಳು ಎದುರಾಗದಂತೆ ಕ್ರಮ ವಹಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಹೈಕೋರ್ಟ್​ ಸೂಚನೆ ನೀಡಿತು.

ಪ್ರಜಾಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 22ರ ಪ್ರಕಾರ ಮತದಾರರ ಪಟ್ಟಿ ನಾಮ ನಿರ್ದೇಶನ ಮಾಡುವುದಕ್ಕಾಗಿ ಕೊನೆಯ ದಿನಾಂಕದವರೆಗೂ ತಿದ್ದುಪಡಿ ಮಾಡುವುದಕ್ಕೆ ಅನುಮತಿ ನೀಡುತ್ತದೆ. ಹೀಗಾಗಿ ಮತದಾರರ ಅಂತಿಮ ಪಟ್ಟಿ ಪ್ರಕಟದ ಆದ ನಂತರ ಪಟ್ಟಿಯನ್ನು ಮತ್ತಷ್ಟು ಪರಿಷ್ಕರಿಸಲು ಅವಕಾಶವಿಲ್ಲ ಎಂಬುದಾಗಿ ಅರ್ಜಿದಾರರ ವಾದವನ್ನು ನ್ಯಾಯಪೀಠ ತಳ್ಳಿ ಹಾಕಿತು. ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ ನಂತರ ಸ್ಥಳಾಂತರಗೊಂಡವರು ಮತ್ತು ಮೃತಪಟ್ಟವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವುದಕ್ಕೆ ಚುನಾವಣಾ ಆಯೋಗಕ್ಕೆ ಅವಕಾಶವಿದೆ ಎಂದು ಹೇಳಿತು.

ಅಲ್ಲದೇ, ಮತದಾರರ ಪಟ್ಟಿಯಿಂದ ತಮ್ಮ ಹೆಸರು ಬಿಟ್ಟು ಹೋಗಿರುವ ವ್ಯಕ್ತಿಗಳು ಯಾವ ಸಂದರ್ಭದಲ್ಲಿ ಬೇಕಾದರೂ ತಮ್ಮ ಹೆಸರನ್ನು ನೋಂದಣಿ ಅಧಿಕಾರಿಯ ಮುಂದೆ ಅರ್ಜಿ ಸಲ್ಲಿಸಿ ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ. ನಿರ್ದಿಷ್ಟ ಕ್ಷೇತ್ರದಲ್ಲಿ ನಾಮ ನಿರ್ದೇಶನ ಮಾಡುವುದು ಮತ್ತು ಅಂತಹ ಕ್ಷೇತ್ರದಿಂದ ವರ್ಗಾವಣೆ ಹಾಗೂ ಮತದಾರರ ಪಟ್ಟಿಯನ್ನು ತಿದ್ದುಪಡಿ ಮಾಡಬಹುದಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿತು.

ಶಿವಾಜಿನಗರ ವಿಧಾನ ಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಇತರ ಕ್ಷೇತ್ರಗಳಲ್ಲಿ ವಾಸಿಸುವ ಮತದಾರರ ಹೆಸರುಗಳು ಸೇರ್ಪಡೆಗೊಂಡಿವೆ ಎಂಬುದಾಗಿ ಈ ಹಿಂದೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಸಂಬಂಧ ನ್ಯಾಯಾಲಯದ ಸೂಚನೆ ಮೇರೆಗೆ ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆಯ ಹೊರಡಿಸಿತ್ತು. ಆಗ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಅವರ ಹೆಸರು ಮತದಾರರ ಪಟ್ಟಿಯಿಂದ ಕಣ್ಮರೆಯಾಗಿತ್ತು. ಇದನ್ನು ಪ್ರಶ್ನಿಸಿ ರಿಜ್ವಾನ್ ಅರ್ಷದ್ ಸೇರಿದಂತೆ ಕ್ಷೇತ್ರದ ಮತದಾರರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲನೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.

SCROLL FOR NEXT