ರಾಜ್ಯ

ಚುನಾವಣೆ ಹೊತ್ತಿನಲ್ಲಿ ಕರ್ನಾಟಕದಲ್ಲಿ ಏನಿದು ಅಮುಲ್ Vs ನಂದಿನಿ ಜಟಾಪಟಿ? ವಿವರಣೆ ಇಲ್ಲಿದೆ...

Nagaraja AB

ಬೆಂಗಳೂರು: ಚುನಾವಣೆ ಹೊತ್ತಿನಲ್ಲೇ ಕರ್ನಾಟಕದಲ್ಲಿ ಅಮುಲ್ ವಿರುದ್ಧ ನಂದಿನಿ ಕದನದ ಬಿಸಿಯೇರುತ್ತಿದೆ. ಮೇಲ್ನೋಟಕ್ಕೆ ಇದು ಕನ್ನಡಿಗರ ಅಭಿಮಾನ, ಭಾವನೆ ಮತ್ತು ಗ್ರಾಮೀಣ ಆರ್ಥಿಕತೆ ಸ್ವದೇಶಿ ಬ್ರಾಂಡ್‌ನ ಮೇಲೆ ಅವಲಂಬಿತವಾಗಿದ್ದು, ಕಾರ್ಪೊರೇಟ್ ಕದನದ ಕೇಂದ್ರಬಿಂದುವಾಗಿ ಕಂಡುಬರುತ್ತಿದ್ದರೂ ಮುಂಬರುವ ದಿನಗಳಲ್ಲಿ ರಾಜಕೀಯವಾಗಿಯೂ ಪ್ರಾಬಲ್ಯ ಸಾಧಿಸಬಹುದಾದ ಸಮಸ್ಯೆಯಿಂದ ಪಾರಾಗಲು ಆಡಳಿತಾರೂಢ ಬಿಜೆಪಿ ಕಸರತ್ತು ನಡೆಸಬೇಕಾಗಬಹುದು.

ಏನಿದು ಅಮುಲ್ Vs ನಂದಿನಿ ಜಟಾಪಟಿ? ಗುಜರಾತ್ ನ ಅಮುಲ್ ಬ್ರಾಂಡ್‌ ಬೆಂಗಳೂರಿನ ಹಾಲು ಮತ್ತು ಮೊಸರಿನ ಮಾರುಕಟ್ಟೆ ಲಗ್ಗೆ ಹಾಕಿರುವುದನ್ನು ಪ್ರತಿಪಕ್ಷಗಳು ಏಕೆ ವಿರೋಧಿಸುತ್ತಿವೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಮುಲ್ ಮತ್ತು ಕೆಎಂಎಫ್ ಎರಡು ಬ್ರ್ಯಾಂಡ್ ಗಳ ವಿಲೀನದ ಹೇಳಿಕೆಯ ತಿಂಗಳ ನಂತರ ಗುಜರಾತ್ ಮೂಲದ ಅಮುಲ್ ತನ್ನ ಹಾಲು ಮತ್ತು ಮೊಸರು ಪೂರೈಸಲು ಕರ್ನಾಟಕ ಮಾರುಕಟ್ಟೆಗೆ ಪ್ರವೇಶಿಸುವುದಾಗಿ ಏಪ್ರಿಲ್ 5 ರಂದು ಘೋಷಿಸಿದ್ದು, ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗಿದ್ದು, ಹಿಗ್ಗಾಮುಗ್ಗಾ ಟೀಕಾ ಪ್ರಹಾರ ನಡೆಸುತ್ತಿವೆ. 

ಶಾ ಸಹಕಾರ ಖಾತೆಯನ್ನೂ ಹೊಂದಿದ್ದಾರೆ. ವಿಧಾನಸಭೆ ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಕರ್ನಾಟಕದ 21,000 ಕೋಟಿ ರೂ. ಮೊತ್ತದ ನಂದಿನಿ ಬ್ರ್ಯಾಂಡ್ ನ್ನು ಅಮುಲ್ ಜೊತೆಗೆ ವಿಲೀನಗೊಳಿಸುಲಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿವೆ. ನಂದಿನಿಯೊಂದಿಗೆ ರಾಜ್ಯದ ಜನತೆಗೆ ಭಾವನಾತ್ಮಕ ಸಂಬಂಧವಿದೆ. 49 ವರ್ಷ ಇತಿಹಾಸವಿರುವ ಕೆಎಂಎಫ್ ನ ನಂದಿನಿಯನ್ನು ಗುಜರಾತಿನ ಅಮುಲ್ ನೊಂದಿಗೆ ವಿಲೀನಗೊಳಿಸಲು ಬಿಜೆಪಿ ಬಯಸಿದೆ. ಇದರಿಂದಾಗಿ ದೇಶದಲ್ಲಿ "ಒಂದು ರಾಷ್ಟ್ರ, ಒಂದು ಅಮುಲ್" ಇರುತ್ತದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಈ ಆರೋಪವನ್ನು ಬಿಜೆಪಿ ಬಲವಾಗಿ ತಳ್ಳಿ ಹಾಕಿದೆ. 

ನಂದಿನಿಯನ್ನು "ಮಾರಾಟ" ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಆರೋಪಿಸಿದ್ದಾರೆ. ಈ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕೂಡ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿಯೇ ತನ್ನ ಏಕೈಕ ಪ್ರತಿಸ್ಪರ್ಧಿ ನಂದಿನಿಯನ್ನು ಮುಗಿಸಲು ಅಮುಲ್ ಈ ಕೆಟ್ಟ ಆಲೋಚನೆಯನ್ನು ಹೊಂದಿದೆ ಎಂದು  ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಅಮೂಲ್ ವಿಚಾರದಲ್ಲಿ ಸರ್ಕಾರ ಸ್ಪಷ್ಟವಾಗಿದೆ. ನಂದಿನಿ ರಾಷ್ಟ್ರ ಮಟ್ಟದ ಬ್ರ್ಯಾಂಡ್ ಆಗಿದೆ. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ಇತರ ರಾಜ್ಯಗಳಲ್ಲಿಯೂ ನಂದಿನಿ ಬ್ರ್ಯಾಂಡ್ ಜನಪ್ರಿಯಗೊಳಿಸಬೇಕಾಗಿದೆ ಎಂದು ಹೇಳಿದ್ದಾರೆ. ಒಂದು ಲೀಟರ್ ನಂದಿನಿ ಟೋನ್ಡ್ ಹಾಲಿನ ಬೆಲೆ ರೂ. 39 ಆದರೆ, ಇದೇ ಪ್ರಮಾಣದ ಅಮುಲ್ ಬೆಲೆ ರೂ. 52 ಆಗಿದೆ. 

ವಿವರಣೆ:

  1. ಅಮುಲ್ ತನ್ನ ಹಾಲು ಮತ್ತು ಮೊಸರನ್ನು ಕರ್ನಾಟಕದಲ್ಲಿ ಮಾರಾಟ ಮಾಡುವ ಘೋಷಣೆ ಏಕೆ ಸಮಸ್ಯೆಯಾಯಿತು? ಕಳೆದ ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ಕೆಎಂಎಫ್‌ನ ಮೆಗಾ ಡೈರಿ ಉದ್ಘಾಟನಾ ಸಮಾರಂಭದಲ್ಲಿ ಅಮಿತ್ ಶಾ ಅವರು "ಅಮುಲ್ ಮತ್ತು ನಂದಿನಿ ನಡುವಿನ ಸಹಕಾರವು ಡೈರಿ ಕ್ಷೇತ್ರದಲ್ಲಿ ಅದ್ಭುತಗಳನ್ನು ಮಾಡಬಹುದು ಎಂದು ಹೇಳಿದ್ದರು. ಪ್ರತಿಪಕ್ಷಗಳು ಇದು ನಂದಿನಿಯನ್ನು ಗುಜರಾತ್‌ನೊಂದಿಗೆ ವಿಲೀನಗೊಳಿಸುವ ಯೋಜನೆ ಎಂದು ಕರೆದರೆ, ಬಿಜೆಪಿ ಇದನ್ನು ತಳ್ಳಿಹಾಕಿತು. ಈ ವರ್ಷದ ಮಾರ್ಚ್ ಕೊನೆಯ ವಾರದಲ್ಲಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಸ್ಥಳೀಯ ನಾಮಕರಣದ ಹೊರತಾಗಿ ಮೊಸರು ಪ್ಯಾಕೆಟ್‌ಗಳಲ್ಲಿ ಹಿಂದಿಯಲ್ಲಿ "ದಹಿ" ಎಂದು ಬರೆಯಲು ನಿರ್ದೇಶನ ನೀಡಿತು, ಇದನ್ನು ವಿರೋಧ ಪಕ್ಷಗಳು ಭಾಷೆಯ ಹೇರಿಕೆ ಎಂದು ಕರೆದವು.
  2. ಅಮುಲ್ ಮೊದಲು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರಲಿಲ್ಲವೇ? ಅಮುಲ್ ತನ್ನ ಬೆಣ್ಣೆ, ತುಪ್ಪ, ಮೊಸರು ಮತ್ತು ಐಸ್ ಕ್ರೀಮ್ ಅನ್ನು ರಾಜ್ಯದಲ್ಲಿ ಬಹಳ ಸಮಯದಿಂದ ಮಾರಾಟ ಮಾಡುತ್ತಿದೆ. ಅಮುಲ್ ಮಾತ್ರವಲ್ಲದೆ, ದೊಡ್ಲಾ ಮತ್ತು ಹೆರಿಟೇಜ್ (ತೆಲಂಗಾಣ), ತಿರುಮಲ, ಆರೋಕ್ಯ ಮತ್ತು ಮಿಲ್ಕಿ ಮಿಸ್ಟ್ (ಟಿಎನ್), ನಾಮಧಾರಿ ಮತ್ತು ಅಕ್ಷಯಕಲ್ಪ (ಕರ್ನಾಟಕ) ನಂತಹ ಪ್ಯಾಕ್ ಮಾಡಿದ ಹಾಲು ಮತ್ತು ಮೊಸರನ್ನು ಮಾರಾಟ ಮಾಡುವ ಇತರ ಕೆಲವು ಡೈರಿ ಬ್ರಾಂಡ್‌ಗಳಿವೆ.
  3. ಪ್ರತಿಪಕ್ಷಗಳ ಭಯವೇನು? ಅಮುಲ್ ಹಾಲು ಮತ್ತು ಮೊಸರನ್ನು ಮಾರಾಟ ಮಾಡಲು ಅವಕಾಶ ನೀಡಿದ ಜನರು ಅದೇ ಉತ್ಪನ್ನ ಖರೀದಿಸುವಂತೆ ಒತ್ತಾಯಿಸುವ ಮೂಲಕ ನಂದಿನಿ ಉತ್ಪನ್ನಗಳು ಕಡಿಮೆ ಪೈಪೋಟಿ ನೀಡುವಂತೆ ಸರ್ಕಾರ ಮಾಡುತ್ತಿದೆ ಎಂದು ಪ್ರತಿಪಕ್ಷಗಳು ಹೇಳುತ್ತಿವೆ. 
  4. ಬಿಜೆಪಿ ಸರ್ಕಾರದ ವಾದ ಏನು? ನಂದಿನಿಯನ್ನು ಅಮುಲ್‌ನೊಂದಿಗೆ ವಿಲೀನಗೊಳಿಸುವ ಯಾವುದೇ ಯೋಜನೆ ಇಲ್ಲ ಎಂದು ಸರ್ಕಾರ ಹೇಳಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಜನರನ್ನು ದಾರಿತಪ್ಪಿಸಲು ಮತ್ತು ಅವರಲ್ಲಿ ಭಯ ಮೂಡಿಸಲು ಪ್ರಯತ್ನಿಸುತ್ತಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಪ್ರಸ್ತುತ ಕೇಸರಿ ಪಕ್ಷದ ಆಡಳಿತದಲ್ಲಿ ಹಾಲಿನ ಉತ್ಪಾದನೆ ಹೆಚ್ಚಿದೆ ಎಂದರು.
  5. ಹಾಲಿನ ಉತ್ಪಾದನೆಯಲ್ಲಿ ಏನಾದರೂ ಇಳಿಕೆಯಾಗಿದೆಯೇ? ಕೆಎಂಎಫ್‌ನ ಭಾಗವಾಗಿರುವ ಬೆಂಗಳೂರು ಮಿಲ್ಕ್ ಯೂನಿಯನ್ ಲಿಮಿಟೆಡ್ (ಬಮುಲ್) ಪ್ರತಿ ವರ್ಷ ಬೇಸಿಗೆಯ ಕಾರಣ ಉತ್ಪಾದನೆ ಕುಸಿದಿದೆ ಎಂದು ಒಪ್ಪಿಕೊಂಡಿದೆ.ಹಾಲಿನ ಉತ್ಪಾದನೆ ದಿನಕ್ಕೆ 90 ಲಕ್ಷ ಲೀಟರ್‌ನಿಂದ 75 ಲಕ್ಷ ಲೀಟರ್‌ಗೆ ಇಳಿಕೆಯಾಗಿದೆ.
  6. ನಂದಿನಿ ವಹಿವಾಟು ಗಾತ್ರ ಎಷ್ಟು? ಅಮುಲ್ ನಂತರದ ಎರಡನೇ ಅತಿದೊಡ್ಡ ಸಹಕಾರಿ ಸಂಸ್ಥೆಯಾಗಿರುವ ನಂದಿನಿ ಕೆಎಂಎಫ್‌ನ 21,000 ಕೋಟಿ ರೂ.ಗಳ ಬ್ರಾಂಡ್ ಆಗಿದೆ ಎಂದು ಬಮುಲ್ ನಿರ್ದೇಶಕ ಪಿ ನಾಗರಾಜು ತಿಳಿಸಿದ್ದಾರೆ. ಅಮುಲ್ ಪ್ರತಿದಿನ 1.8 ಕೋಟಿ ಲೀಟರ್ ಹಾಲನ್ನು ಉತ್ಪಾದಿಸಿದರೆ ಕೆಎಂಎಫ್ ದಿನಕ್ಕೆ 90 ಲಕ್ಷ ಲೀಟರ್‌ಗಿಂತಲೂ ಹೆಚ್ಚು ಹಾಲು ಉತ್ಪಾದಿಸುತ್ತದೆ ಎಂದು ಅವರು ಹೇಳುತ್ತಾರೆ.
  7. ನಂದಿನಿ ಏಕೆ ಮಾರುಕಟ್ಟೆ ಲೀಡರ್? ಹಾಲಿನ ಬೆಲೆಗಳು ಸ್ಪರ್ಧಾತ್ಮಕವಾಗಿವೆ, ಶೂನ್ಯ ಕಲಬೆರಕೆಯೊಂದಿಗೆ ಗುಣಮಟ್ಟವು ಉತ್ತಮವಾಗಿದೆ, ಹಾಲು ಉತ್ಪಾದಕರು ಮತ್ತು ಹಾಲು ಒಕ್ಕೂಟದ ಉತ್ತಮ ಜಾಲ ಮತ್ತು ಉತ್ಪನ್ನಗಳ ಬಗ್ಗೆ ಜನರ ಹೆಮ್ಮೆ ಎನ್ನುತ್ತಾರೆ ನಾಗರಾಜು.
  8. ಕೆಎಂಎಫ್ ತನ್ನ ಉತ್ಪನ್ನಗಳನ್ನು ಕರ್ನಾಟಕವಲ್ಲದೆ ಬೇರೆಲ್ಲಿ ಮಾರಾಟ ಮಾಡುತ್ತದೆ? ನಂದಿನಿ ಉತ್ಪನ್ನಗಳನ್ನು ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಮಾರಾಟ ಮಾಡಲಾಗುತ್ತದೆ. ಅದರ ಕೆಲವು ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತದೆ.
  9. ನಂದಿನಿ ತನ್ನ ಉತ್ಪನ್ನಗಳನ್ನು ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡಬಹುದಾದರೆ, ಅಮುಲ್ ಕರ್ನಾಟಕದಲ್ಲಿ ವ್ಯಾಪಾರ ಮಾಡುವುದರಲ್ಲಿ ತಪ್ಪೇನು? ನಾಗರಾಜು ಅವರ ಪ್ರಕಾರ, ಮಹಾರಾಷ್ಟ್ರ ರಾಜ್ಯ ಸಹಕಾರಿ ಮಿಲ್ಕ್ ಫೆಡರೇಶನ್ ಲಿಮಿಟೆಡ್, ಮಹಾನಂದ್ ಡೈರಿ ಎಂದೂ ಕರೆಯಲ್ಪಡುತ್ತದೆ, ಅಮುಲ್ ಮಾರುಕಟ್ಟೆಗೆ ಪ್ರವೇಶಿಸಿದಾಗಿನಿಂದಲೂ ಉತ್ತಮ ವ್ಯಾಪಾರ ಮಾಡುತ್ತಿಲ್ಲ. ಅದೇ ರೀತಿ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಸಹಕಾರಿ ಹಾಲು ಒಕ್ಕೂಟಗಳು ಅಷ್ಟಾಗಿ ಬೆಳೆದಿಲ್ಲ.
  10. ಈ ವಿವಾದದಿಂದ ಹೊರಬರಲು ಕರ್ನಾಟಕ ಬಿಜೆಪಿಗೆ ಏಕೆ ಮುಖ್ಯವಾಗಿದೆ? ಗ್ರಾಮೀಣ ಆರ್ಥಿಕತೆಯು ಕೆಎಂಎಫ್‌ನ ಮೇಲೆ ಅವಲಂಬಿತವಾಗಿರುವಾಗ ಮತ್ತು ಕನ್ನಡಿಗರ ಭಾವನೆಗಳು ನಂದಿನಿ ಬ್ರಾಂಡ್‌ಗೆ ಆಳವಾಗಿ ಅಂಟಿಕೊಂಡಿರುವಾಗ, ಮೇ 10 ರ ವಿಧಾನಸಭಾ ಚುನಾವಣೆಯ ನಂತರ ಅಧಿಕಾರವನ್ನು ಉಳಿಸಿಕೊಳ್ಳಲು ಆಡಳಿತಾರೂಢ ಬಿಜೆಪಿ ಶುದ್ಧವಾಗಿ ಹೊರಬರುವುದು ಅತ್ಯಗತ್ಯ. ಕೇಸರಿ ಪಕ್ಷದ ಚುನಾವಣಾ ಭವಿಷ್ಯವನ್ನು ಹಾಳುಮಾಡುವ ಸಾಮರ್ಥ್ಯವನ್ನು ಹೊಂದಿರುವ ಪ್ರಮುಖ ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ (ಎಸ್) ಯಾವುದೇ ಅಸ್ತ್ರವನ್ನು ಬಿಡುತ್ತಿಲ್ಲ.
SCROLL FOR NEXT