ರಾಜ್ಯ

ಯುದ್ಧ ಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಕರ್ನಾಟಕದ 31 ಆದಿವಾಸಿ ಜನರು

Nagaraja AB

ಬೆಂಗಳೂರು: ಕರ್ನಾಟಕದ ಹಕ್ಕಿ-ಪಿಕ್ಕಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಸುಮಾರು 31 ಜನರು ಯುದ್ಧ ಪೀಡಿತ ಸುಡಾನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಕರ್ನಾಟಕದ 31 ಜನರ ಗುಂಪೊಂದು ಸುಡಾನ್‌ನಲ್ಲಿ ಸಿಲುಕಿರುವ ಸಂದೇಶ ಬಂದಿದೆ. ಈ ಬಗ್ಗೆ ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಿದ್ದೇವೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್  ತಿಳಿಸಿದ್ದಾರೆ.  

ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸೂಚನೆಗಳನ್ನು ಪಾಲಿಸುವಂತೆ ಆ ಗುಂಪಿಗೆ ಇಲಾಖೆ  ತಿಳಿಸಿದೆ. ಸಂಕಷ್ಟಕ್ಕೆ ಸಿಲುಕಿರುವವರು ಎಲ್ಲಿ ಇದ್ದೀರೋ ಅಲ್ಲಿಯೇ ಇರಿ. ಹೊರಗೆ ಹೋಗಬೇಡಿ ಎಂದು ಹೇಳಲಾಗಿದ್ದು, ಎಂಇಎ  ಅದರ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ರಾಜನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸೂಡಾನ್ ನಲ್ಲಿ ಸಿಲುಕಿರುವ ಕರ್ನಾಟಕದ ಜನರನ್ನು ದೇಶಕ್ಕೆ ಕರೆತರಬೇಕು ಎಂದು ಒತ್ತಾಯಿಸಿದ್ದಾರೆ.

ಸೂಡಾನ್ ನಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಇಲ್ಲಿಯವರೆಗೂ 185 ಜನರು ಹತ್ಯೆಯಾಗಿದ್ದು, ಸುಮಾರು 1,800 ಮಂದಿ ಗಾಯಗೊಂಡಿದ್ದಾರೆ.
 

SCROLL FOR NEXT