ರಾಜ್ಯ

'ಸಮ್ಮಿಶ್ರ ಸರ್ಕಾರ ಪತನಗೊಳಿಸಿದ 11 ಬಂಡಾಯ ಶಾಸಕರ ಖಜಾನೆ ಈಗ ಹೇರಳ, ಸಮೃದ್ಧ'!

Manjula VN

ಮೈಸೂರು: 2019ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳಿಸಿ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಬಿಜೆಪಿಗೆ ಹಾರಿ, ಸಚಿವ ಸಂಪುಟ ಸೇರಿದ್ದ 11 ಮಂದಿ ಬಂಡಾಯ ಶಾಸಕರ ಆಸ್ತಿಯಲ್ಲಿ ಭಾರೀ ಏರಿಕೆಯಾಗಿರುವುದು ಕಂಡು ಬಂದಿದೆ.

11 ಮಂದಿ ಬಂಡಾಯ ಶಾಸಕರ ಸ್ಥಿರಾಸ್ಥಿ ಹಾಗೂ ಚರಾಸ್ತಿಗಳಲ್ಲಿ ಭಾರೀ ಏರಿಕೆಗಳು ಕಂಡು ಬಂದಿದ್ದು, ಬಹುತೇಕ ನಾಯಕರು ಈ ಆಸ್ತಿಯನ್ನು ತಮ್ಮ ಪತ್ನಿಯರ ಹೆಸರಿನಲ್ಲಿ ನೋಂದಾವಣಿ ಮಾಡಿಕೊಂಡಿರುವುದು ವರದಿಗಳಿಂದ ತಿಳಿದುಬಂದಿದೆ.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು 2018ರಲ್ಲಿ ಸ್ಪರ್ಧಿಸಿದಾಗ 1.11 ಕೋಟಿ ರೂ.ಗಳಷ್ಟಿದ್ದ ಚರ ಆಸ್ತಿ ಇದೀಗ  ರೂ.2.79 ಕೋಟಿಗಳಷ್ಟಾಗಿದೆ. ಅದೇ ರೀತಿ 52,81,000 ರೂ.ಗಳಷ್ಟಿದ್ದ ಅವರ ಸ್ಥಿರಾಸ್ತಿ ಈಗ ರೂ.1,66,60,480 ಆಗಿದೆ.

ಸುಧಾಕರ್ ಅವರ ಪತ್ನಿಗೆ ಸೇರಿದ ಸ್ಥಿರಾಸ್ತಿಯು 2018 ರಲ್ಲಿ 1,17,63,871 ರೂಪಾಯಿಗಳಷ್ಟಿತ್ತು. ಇದೀಗ ಕೇವಲ ಐದು ವರ್ಷಗಳಲ್ಲಿ 16,10,04,961 ರೂಪಾಯಿಗಳಿಗೆ ಏರಿಕೆಯಾಗಿರುವುದು ಕಂಡು ಬಂದಿದೆ.

ಇನ್ನು 2018ರಲ್ಲಿ 18,93,217 ರೂಗಳಿಷ್ಟಿದ್ದ ಮಹೇಶ್ ಕುಮಟಹಳ್ಳಿ ಚರಾಸ್ತಿ, ಇದೀಗ 1,33,32,819 ರೂ.ಗೆ ಏರಿಕೆಯಾದರೆ, 2018ರಲ್ಲಿ 67.83 ಲಕ್ಷ ಇದ್ದ ಸಹಕಾರ ಸಚಿವ ಎಸ್‌ಟಿ ಸೋಮಶೇಖರ್‌ ಅವರ ಚರ ಆಸ್ತಿ 2023ರಲ್ಲಿ 5.46 ಕೋಟಿ ರೂಗೆ ಏರಿಕೆಯಾಗಿದೆ.

ಈ ಹಿಂದೆ ತಮ್ಮ ಪತ್ನಿಯ ಆಸ್ತಿಯನ್ನು ಘೋಷಿಸದ ಅನೇಕರು ನಾಯಕರು ಈ ಬಾರಿಯ ವಿಧಾನಸಭೆ ಚುನಾವಣೆ ವೇಳೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಫಿಡವಿಟ್ ಸಲ್ಲಿಸಿದ್ದಾರೆ.

ಅವರಲ್ಲಿ ಒಬ್ಬರಾದ ಬಿ.ಎ.ಬಸವರಾಜು ಅವರು ತಮ್ಮ ಪತ್ನಿ ಬಳಿ 56.57 ಲಕ್ಷ ಚರ ಆಸ್ತಿ ಮತ್ತು 21.57 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ ಎಂದು ಘೋಷಿಸಿದ್ದಾರೆ.

2018ರಲ್ಲಿ 3.12 ರೂ. ಕೋಟಿ ಸ್ಥಿರಾಸ್ತಿ ಹೊಂದಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್ ಈಗ, 2023ರಲ್ಲಿ 19.60 ಕೋಟಿ ರೂಪಾಯಿ ಮೌಲ್ಯದ ವಾಣಿಜ್ಯ ಸಂಕೀರ್ಣ ಮತ್ತು ಮನೆ ಹೊಂದಿದ್ದಾರೆ.

ಈ ಆಸ್ತಿ ಹೆಚ್ಚಳಕ್ಕೆ ಸಂಪುಟ ದರ್ಜೆ ಸ್ಥಾನಮಾನ ಹಾಗೂ ವೇತನ ಹೆಚ್ಚಳ ಕಾರಣವೆಂದು ನಾಯಕರು ಹೇಳಿಕೊಂಡಿದ್ದಾರೆ. ಇಷ್ಟರ ಮಟ್ಟಿಗಿನ ಆಸ್ತಿ ಏರಿಕೆಯು ಹಲವರ ಹುಬ್ಬೇರುವಂತೆ ಮಾಡಿದೆ.

SCROLL FOR NEXT