ರಾಜ್ಯ

ಮಂಡ್ಯ: ಕಾವೇರಿ ನಾಲೆಯಲ್ಲಿ ಈಜಲು ತೆರಳಿದ್ದ ಬೆಂಗಳೂರಿನ ಒಂದೇ ಕುಟುಂಬದ ಐವರು ಮಕ್ಕಳು ಸಾವು

Ramyashree GN

ಮಂಡ್ಯ: ತಾಲೂಕಿನಲ್ಲಿ ಮಂಗಳವಾರ ನಡೆದ ದಾರುಣ ಘಟನೆಯೊಂದರಲ್ಲಿ, ಐವರು ಮಕ್ಕಳು ನಾಲೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮಂಡ್ಯದ ಬಸರಾಳು ಹೋಬಳಿಯ ದೊಡ್ಡಕೊತ್ತಗೆರೆಯ ಗ್ರಾಮದ ವಿಶ್ವೇಶ್ವರಯ್ಯ ನಾಲೆಯಲ್ಲಿ ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಮೃತರನ್ನು ಹನ್ಸಿಯಾ ಬೇಗಂ, ಮಹತಾಬ್, ತಸ್ಮಿಯಾ, ಅಶ್ರಫ್ ಮತ್ತು ಅತೀಕ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನ ನೀಲಸಂದ್ರದ ನಿವಾಸಿಗಳಾದ ಮಕ್ಕಳು, ರಂಜಾನ್ ಹಬ್ಬ ಆಚರಿಸಲು ಮಂಡ್ಯದ ಹಳ್ಳಗೆರೆ ಗ್ರಾಮದ ಅಜ್ಜಿ ಮನೆಗೆ ಬಂದಿದ್ದರು. ನಾಲೆಗೆ ಆಟವಾಡಲೆಂದು ತೆರಳಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮಕ್ಕಳಿಗೆ ಶಾಲೆಗೆ ರಜೆಯಿದ್ದ ಕಾರಣ ಕುಟುಂಬ ಸಮೇತ ನೆಂಟರ ಮನೆಗೆ ಬಂದಿದ್ದರು. ಈ ವೇಳೆ, ಮನೆಗೆ ಬಂದಿದ್ದ ಎಲ್ಲರೂ ಎರಡು ಕಾರಿನಲ್ಲಿ ಬಸರಾಳು ಬಳಿ ಇರುವ ಕಾವೇರಿ ನಾಲೆಗೆ ಈಜಲು ಹೋಗಿದ್ದಾರೆ. ಈಜಲೆಂದು ನೀರಿಗೆ ಧುಮುಕಿದಾಗ ಅವಘಡ ಸಂಭವಿಸಿದೆ. ಈ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಮೂರು ಶವಗಳನ್ನು ನಾಲೆಯಿಂದ ಹೊರಕ್ಕೆ ತೆಗೆದಿದ್ದು, ಉಳಿದ ಇಬ್ಬರು ಮಕ್ಕಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. 

ಈ ನಡುವೆ ಬಸರಾಳು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

SCROLL FOR NEXT