ರಾಜ್ಯ

8 ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಬಲೆಗೆ ಬಿದ್ದ ಕುಬೇರರು, ವಿದೇಶಿ ಹಣ, ಚಿನ್ನಾಭರಣ ವಶಕ್ಕೆ

Manjula VN

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ನಡೆಸಿದ ದಾಳಿಯ್ಲಿ ಕುಬೇರರ ಆಸ್ತಿಯ ಮಾಹಿಲಿ ಲಭ್ಯವಾಗಿದ್ದು, ಕೋಟ್ಯಾಂತರ ರುಪಾಯಿ ಮೌಲ್ಯದ ಸ್ಥಿರಾಸ್ತಿ ಸಂಪಾದನೆ ಮಾಡಿರುವುದು ಪರಿಶೀಲನೆ ವೇಲೆ ತಿಳಿದುಬಂದಿದೆ.

6 ಜಿಲ್ಲೆಗಳ 8 ಸರ್ಕಾರಿ ಅಧಿಕಾರಿಗಳ 34 ಆಸ್ತಿಗಳ ಮೇಲೆ ಲೋಕಾಯುಕ್ತ ಪೊಲೀಸರು ಸೋಮವಾರ ಮತ್ತು ಮಂಗಳವಾರ ಏಕಕಾಲಕ್ಕೆ ದಾಳಿ ನಡೆಸಿದ್ದರು. ಈ ವೇಳೆ ಅಪಾರ ಪ್ರಮಾಣದ ಹಣ ಮತ್ತು ಅಕ್ರಮ ಆಸ್ತಿಗಳು ಪತ್ತೆಯಾಗಿವೆ.  

8 ಮಂದಿಯ ಪೈಕಿ ಬಿಬಿಎಂಪಿ ನಗರ ಯೋಜನಾ ಸಹಾಯಕ ನಿರ್ದೇಶಕ (ಯಲಹಂಕ ವಲಯ) ಕೆ.ಎಲ್.ಗಂಗಾಧರಯ್ಯ ಅವರು ಅತೀ ಹೆಚ್ಚು ಅಕ್ರಮ ಆಸ್ತಿ ಹೊಂದಿರುವುದು ಪತ್ತೆಯಾಗಿದೆ.

ಗಂಗಾಧರಯ್ಯ ಅವರಿಗೆ ಸೇರಿದ ಮನೆ ಹಾಗೂ ಕಚೇರಿ ಸೇರಿದಂತೆ ಒಟ್ಟು 8 ಸ್ಥಳಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಬೆಂಗಳೂರಿನಲ್ಲಿ 14 ಫ್ಲ್ಯಾಟ್'ಗಳು, ನೆಲಮಂಗಲ ಬಳಿ 5 ಎಕರೆ ಕೃಷಿ ಭೂಮಿ ಮತ್ತು 73 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಹೊಂದಿರುವುದು ಕಂಡು ಬಂದಿದೆ.

ಇದಲ್ಲದೆ, 1.47 ಕೋಟಿ ನಗದು, 10,298 ಅಮೆರಿಕನ್ ಡಾಲರ್, 1,180 ದುಬೈ ದಿರ್ಹಾಮ್, 35 ಈಜಿಪ್ಟ್ ಪೌಂಡ್ ಮತ್ತು 50 ಲಕ್ಷ ರೂ.ಗೂ ಅಧಿಕ ಗೃಹೋಪಯೋಗಿ ವಸ್ತುಗಳನ್ನು ಹೊಂದಿದ್ದಾರೆ. ಗಂಗಾಧರಯ್ಯ ಅವರ ವಿವಿಧ ಸ್ಥಿರಾಸ್ತಿಗಳ ದಾಖಲೆಗಳನ್ನೂ ದಾಳಿ ವೇಳೆ ಪತ್ತೆ ಹಚ್ಚಲಾಗಿದೆ.

ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ರಾಜಕಾಲುವೆ ವಿಭಾಗದ (ಬೊಮ್ಮನಹಳ್ಳಿ ವಲಯ) ಟಿ.ಹನುಮಂತರಾಯಪ್ಪ ಅವರಿಗೆ ಸೇರಿದ ಮೂರು ಸ್ಥಳಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹಿರಿಯೂರು ತಾಲ್ಲೂಕಿನಲ್ಲಿ 25 ಎಕರೆ 23 ಗುಂಟ ಅಡಿಕೆ ಮತ್ತು ಬಾಳೆ ತೋಟಗಳು, ಎರಡು ಕೋಳಿ ಫಾರಂಗಳು ಮತ್ತು ಹಿರಿಯೂರು ಪಟ್ಟಣದಲ್ಲಿ ಎರಡು ನಿವೇಶನಗಳು ಮತ್ತು ಬೆಂಗಳೂರಿನಲ್ಲಿ ಒಂದು ಮನೆ ಪತ್ತೆಯಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ನಿವೃತ್ತ ಅರಣ್ಯ ಉಪ ಸಂರಕ್ಷಣಾಧಿಕಾರಿ ಐ.ಎಂ.ನಾಗರಾಜ ಅವರ ಮೂರು ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.

ಹೊನ್ನಾಳಿ ಪಟ್ಟಣದಲ್ಲಿ ಮನೆ, ಶಿವಮೊಗ್ಗ ನಗರದಲ್ಲಿ ಮನೆ, ನಾಲ್ಕು ವಾಣಿಜ್ಯ ಸಂಕೀರ್ಣಗಳು, ಬೆಂಗಳೂರಿನ ಕಗ್ಗಲಿಪುರದಲ್ಲಿ ಫ್ಲಾಟ್, ತೋಟದ ಮನೆ, 10 ಎಕರೆ ಅಡಿಕೆ ತೋಟ, ನಾಲ್ಕು ನಿವೇಶನ ಮತ್ತು ಕೈಗಾರಿಕಾ ಪ್ರದೇಶದಲ್ಲಿ ನಾಲ್ಕು ಫ್ಲಾಟ್‌ಗಳು. ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ 4 ನಾಲ್ಕು ಚಕ್ರದ ವಾಹನಗಳು ಪತ್ತೆಯಾಗಿವೆ.

ಬಳ್ಳಾರಿ ಜಿಲ್ಲೆಯಲ್ಲಿ ಗೆಸ್ಕಾಂನ ಕಾರ್ಯಪಾಲಕ ಎಂಜಿನಿಯರ್ ಹುಸೇನ್ ಸಾಬ್ ಅವರ ಆರು ಆಸ್ತಿಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಮೂರು ಮನೆ, ನಿವೇಶನ, 6 ಎಕರೆ 20 ಗುಂಟ ಕೃಷಿ ಭೂಮಿ, 4 ನಾಲ್ಕು ಚಕ್ರದ ವಾಹನಗಳು, 1,487 ಗ್ರಾಂ ಚಿನ್ನಾಭರಣ, 680 ಗ್ರಾಂ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ.

ಬೀದರ್ ನಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸುರೇಶ ಮೇಡಾ ಅವರ ಬಳಿ ಎರಡು ಮನೆ, ಮೂರು ನಿವೇಶನ, 3 ನಾಲ್ಕು ಚಕ್ರದ ವಾಹನ, ಮೂರು ದ್ವಿಚಕ್ರ ವಾಹನ, 11.34 ಲಕ್ಷ ನಗದು, 1,892 ಗ್ರಾಂ ಚಿನ್ನಾಭರಣ, 6 ಕೆಜಿ ಬೆಳ್ಳಿ ವಸ್ತುಗಳು, 45 ಲಕ್ಷ ರೂ. ಎಲ್ಐಸಿ ಬಾಂಡ್ಗಳು ಪತ್ತೆಯಾಗಿವೆ.

ಬೀದರ್ ನ ಬಸವಕಲ್ಯಾಣ ತಾಲೂಕಿನ ಮುಡುಬಿ ಹೋಬಳಿ ಉಪ ತಹಶೀಲ್ದಾರ್ ವಿಜಯಕುಮಾರಸ್ವಾಮಿ ಅವರ ಬಳಿ, ಮನೆ, 15 ನಿವೇಶನ, ಆಟೊ ಗ್ಯಾರೇಜ್, ಎರಡು ನಾಲ್ಕು ಚಕ್ರದ ವಾಹನ ಹಾಗೂ ಚಿನ್ನಾಭರಣ ಇರುವುದು ಪತ್ತೆಯಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ತಹಶೀಲ್ದಾರ್ ಎನ್.ಜೆ.ನಾಗರಾಜ ಅವರು ಶಿಕಾರಿಪುರ ಪಟ್ಟಣ ಹಾಗೂ ಚನ್ನಗಿರಿ ತಾಲ್ಲೂಕಿನಲ್ಲಿ ಮನೆಗಳು, 244 ಗ್ರಾಂ ಚಿನ್ನ, 533 ಗ್ರಾಂ ಬೆಳ್ಳಿ ವಸ್ತುಗಳು, ಕಾರು, ದ್ವಿಚಕ್ರ ವಾಹನ, ಸ್ಥಿರಾಸ್ತಿಗಳ ದಾಖಲೆಗಳು ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಿರುವುದು ಕಂಡು ಬಂದಿದೆ.

ಕೋಲಾರ ಜಿಲ್ಲೆಯ ಬಾಗೇಪಲ್ಲಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶಪ್ಪ ಅವರಿಗೆ ಸೇರಿದ 5 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದ್ದು, ಈ ವೇಳೆ 14 ಎಕರೆ ಕೃಷಿ ಭೂಮಿ, ಬಂಗಾರಪೇಟೆಯಲ್ಲಿ ನಿವೇಶನ, ತಿಪ್ಪದೊಡ್ಡಹಳ್ಳಿಯಲ್ಲಿ ಮನೆ, ಬಂಗಾರಪೇಟೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮನೆ, ಹಾರ್ಡ್‌ವೇರ್ ಅಂಗಡಿ ಮತ್ತು ಗೋದಾಮು, ನಾಲ್ಕು ಕೋಳಿ ಶೆಡ್‌ಗಳು, 550 ಗ್ರಾಂ ಚಿನ್ನಾಭರಣ, 3 ಕೆಜಿ ಬೆಳ್ಳಿ ವಸ್ತುಗಳು, ಎರಡು ಕಾರುಗಳು, ಒಂದು ಟ್ರ್ಯಾಕ್ಟರ್ ಮತ್ತು ನಾಲ್ಕು ದ್ವಿಚಕ್ರ ವಾಹನಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

SCROLL FOR NEXT