ರಾಜ್ಯ

ಬೆಂಗಳೂರು: 4 ಕೋಟಿ ರೂ. ವಿಮೆ ಪಡೆಯಲು ದರೋಡೆ ನಾಟಕ ಮಾಡಿದ್ದ ಆಭರಣ ವ್ಯಾಪಾರಿ ಬಂಧನ!

Shilpa D

ಬೆಂಗಳೂರು: ಇನ್ಸುರೆನ್ಸ್ ಹಣ ಹಾಗೂ ಚಿನ್ನಾಭರಣಗಳ ಮಾರಾಟದಿಂದ 4 ಕೋಟಿಗೂ ಅಧಿಕ ಅಕ್ರಮ ಹಣ ಸಂಪಾದನೆ ಮಾಡಲು ಸಂಚು ರೂಪಿಸಿ, ಸುಳ್ಳು ದರೋಡೆ ಪ್ರಕರಣ ದಾಖಲಿಸಿದ್ದ ನಗರತ್‍ಪೇಟೆಯ ಚಿನ್ನಾಭರಣ ವ್ಯಾಪಾರಿಯನ್ನು ಕಾಟನ್‍ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎನ್ ಟಿ ಪೇಟೆ ಕೇಸರ್ ಜುವೆಲರ್ಸ್ ಅಂಗಡಿಯ ಮಾಲೀಕ ರಾಜಸ್ಥಾನ ಮೂಲದ ರಾಜಾ ಜೈನ್ (22)ಬಂಧಿತ ಆರೋಪಿ. ಜು.12 ರಂದು ರಾತ್ರಿ ತಮ್ಮ ಸಂಬಂಧಿಗಳೊಂದಿಗೆ ಸಂಜೆ 7.30ರ ಸುಮಾರಿನಲ್ಲಿ ಜುವೆಲರಿ ಶಾಪ್‍ನಿಂದ ಹೊರಟು ಹೈದರಾಬಾದ್‍ಗೆ ಕಳುಹಿಸಲು 3 ಕೆ.ಜಿ 780 ಗ್ರಾಂ ಚಿನ್ನಭಾರಣಗಳನ್ನು ತಮ್ಮ ದ್ವಿ ಚಕ್ರ ವಾಹನದಲ್ಲಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು.

ಆ ಸಂದರ್ಭದಲ್ಲಿ ಮೈಸೂರು ರಸ್ತೆಯ ಫ್ಲೈ ಓವರ್ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಹಿಂದಿನಿಂದ ಬಂದು ಹಲ್ಲೆ ಮಾಡಿ ತಮ್ಮ ಬಳಿ ಇದ್ದ ಚಿನ್ನಾಭರಣವಿದ್ದ ಬ್ಯಾಗ್ ಕಿತ್ತುಕೊಂಡು ಹೋಗಿದ್ದಾರೆಂದು ಕಾಟನ್‍ಪೇಟೆ ಪೊಲೀಸ್ ಠಾಣೆಗೆ ಮಾಲೀಕ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ಆರೋಪಿಗಳು ಹಾಗೂ ಚಿನ್ನಾಭರಣ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತನಿಖಾ ತಂಡವು ತಾಂತ್ರಿಕ ಹಾಗೂ ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸಿದಾಗ ಇನ್ಸುರೆನ್ಸ್ ಕ್ಲೈಮ್ ಮಾಡಿಕೊಳ್ಳಲು ಹಾಗೂ ಸುಲಿಗೆಯಾಗಿದೆಯೆಂದು ಹೇಳಿದ ಚಿನ್ನಾಭರಣಗಳನ್ನು ಮಾಲೀಕ ತನ್ನ ಬಳಿಯೇ ಇಟ್ಟುಕೊಂಡಿರುವ ಬಗ್ಗೆ ಮಾಹಿತಿ ಕಲೆ ಹಾಕಿ ಮಾಲೀಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸುಳ್ಳು ದೂರು ನೀಡಿರುವುದು ಗೊತ್ತಾಗಿದೆ.

ಚಿನ್ನಾಭರಣ ಮಾಲೀಕನು ಸುಲಿಗೆಯಾಗಿದೆಯೆಂಬ ಆಭರಣಗಳನ್ನು ಬೇರೋಬ್ಬರಿಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ತನ್ನ ಸಂಬಂಧಿ ಗಳಾದ ಇಬ್ಬರು ಬಾಲಪರಾಧಿಗಳಿಗೆ ತರಬೇತಿ ನೀಡಿ ಬಳಸಿಕೊಂಡಿರುವುದು ತನಿಖೆಯಿಂದ ತಿಳಿದು ಬಂದಿದೆ.

ತರಬೇತಿ ಪಡೆದ ಅಪ್ರಾಪ್ತ ಬಾಲಕರು ಚಿನ್ನಭರಣದ ಬಾಕ್ಸ್ ಅನ್ನು ಅಂಗಡಿಯ ಸಿಸಿಟಿವಿ ಕ್ಯಾಮರಗಳ ಮುಂದೆಯೇ ಪ್ಯಾಕ್ ಮಾಡಿ, ಸಿಸಿ ಕ್ಯಾಮರಾದಲ್ಲಿ ಕಾಣುವಂತೆ ಗಾಡಿಯಲ್ಲಿ ಚಿನ್ನಾಭರಣವಿದ್ದ ಬ್ಯಾಗನ್ನು ಇಟ್ಟುಕೊಂಡು ಹೋಗಿದ್ದಾರೆ.

ನಂತರ ಗಾಡಿಯಲ್ಲಿ ಸಿಟಿ ಮಾರ್ಕೆಟ್ ಪ್ಲೈ ಓವರ್ ಮೇಲೆ ಬಂದು, ದ್ವಿಚಕ್ರ ವಾಹನವನ್ನು ಸಿಸಿ ಕ್ಯಾಮರಾಗಳಿಲ್ಲದ ಪ್ಲೈ ಓವರ್ ಮೇಲಿನ ಖಾಲಿ ಜಾಗದಲ್ಲಿ ನಿಲ್ಲಿಸಿ, ಬ್ಯಾಗ್‍ನಿಂದ ಚಿನ್ನಾಭರಣದ ಬಾಕ್ಸ್ ತೆಗೆದು, ಬೇರೊಂದು ಗಾಡಿಯ ಡಿಕ್ಕಿಗೆ ಇಟ್ಟುಕೊಂಡಿದ್ದಾರೆ.

ನಂತರ ಬ್ಯಾಗ್ ಬಿಸಾಡಿ, ದರೋಡೆಯಾಗಿದೆಂದು ನಂಬಿಸಲು, ಘಟನೆ ನಡೆದ ಸ್ಥಳದಿಂದಲೇ ಪೋನ್ ಕಾಲ್ ಬರುವಂತೆ ಮಾಡಿದ್ದಾನೆ. ವಾಟ್ಸಾಪ್ ಕಾಲ್ ನಿಂದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

SCROLL FOR NEXT