ರಾಜ್ಯ

ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಇಂದಿನಿಂದ ಫಲಪುಷ್ಪ ಪ್ರದರ್ಶನ: ಸಿಎಂ ಸಿದ್ದರಾಮಯ್ಯ ಉದ್ಘಾಟನೆ

Sumana Upadhyaya

ಬೆಂಗಳೂರು: ಸಸ್ಯಕಾಶಿ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಇಂದು ಆಗಸ್ಟ್ 4 ಶುಕ್ರವಾರದಿಂದ 76ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಫಲಪುಷ್ಪ ಪ್ರದರ್ಶನ(Lalbagh flower show) ಏರ್ಪಡಲಿದೆ. 

76ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆಯಲಿರುವ 214ನೇ ಫ್ಲವರ್ ಶೋ ಇದಾಗಿದೆ. ಇಂದು ಸಂಜೆ 6 ಗಂಟೆಗೆ ಸಿಎಂ‌ ಸಿದ್ದರಾಮಯ್ಯರನವರು ಉದ್ಘಾಟನೆ ಮಾಡಲಿದ್ದಾರೆ. ವಿಧಾನಸೌಧ ಹಾಗೂ ಅದರ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಥೀಮ್ ನಲ್ಲಿ ನಡೆಯುತ್ತಿದ್ದು, ರಾಜ್ಯದ ಹಿರಿಮೆ ಹಿಗ್ಗಿಸಿದ ಕೆಂಗಲ್ ಹನುಮಂತಯ್ಯ ಅವರ ಬದುಕು, ಸಾಧನೆ ಹಾಗೂ ಅವರ ಕನಸುಗಳ ಬಗೆಗಿನ ಸಂಪೂರ್ಣ ಮಾಹಿತಿ ಫಲಕಗಳ ಮೂಲಕ ಜನರಿಗೆ ಇಲ್ಲಿ ತಿಳಿಸಲಾಗುತ್ತಿದೆ. ಜೊತೆಗೆ ಲಾಲ್ ಬಾಗ್​ನ ಗಾಜಿನ ಮನೆಯಲ್ಲಿ ಹೂವಿನಲ್ಲಿ ವಿಧಾನಸೌಧ ತಲೆ ಎತ್ತಿ ನಿಂತಿದೆ.

ಫ್ಲವರ್​ ಶೋಗೆ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯದಿಂದಲೂ ಹೂವುಗಳನ್ನು ತರಿಸಿಕೊಳ್ಳಲಾಗುತ್ತಿದೆ. ಬರೊಬ್ಬರಿ 15ರಿಂದ 17 ಲಕ್ಷ ಹೂವುಗಳಿಂದ ಕಂಗೊಳಿಸಲಿದೆ. ಇಂದಿನಿಂದ ಆರಂಭವಾಗುವ ಫಲಪುಷ್ಪ ಪ್ರದರ್ಶನ ಆಗಸ್ಟ್ 15ರವರೆಗೂ ಮುಂದುವರಿಯಲಿದೆ. ಫ್ಲವರ್ ಶೋಗೆ ಎರಡೂವರೆ ಕೋಟಿ ಹಣ ವೆಚ್ಚ ಮಾಡಲಾಗಿದೆ.

ಫ್ಲವರ್ ಶೋ ವೀಕ್ಷಣೆಗೆ ಲಕ್ಷಾಂತರ ಜನ ಆಗಮ ಹಿನ್ನಲೆ ಸಂಚಾರ ದಟ್ಟಣೆ ಉಂಟಾಗಲಿದೆ. ಹಾಗಾಗಿ ಪರ್ಯಾಯ ಮಾರ್ಗ ಜೊತೆಗೆ ನಿಗದಿತ ಸ್ಥಳದಲ್ಲಿ ವಾಹನ ಪಾರ್ಕ್ ಮಾಡಲು ಸೂಚನೆ ನೀಡಲಾಗಿದೆ.

ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿರುವ ಸ್ಥಳಗಳು
ಡಾ.ಮರಿಗೌಡ ರಸ್ತೆ, ಆಲ್ ಅಮೀನ್ ಕಾಲೇಜ್ ಆವರಣದಲ್ಲಿ ದ್ವಿಚಕ್ರ ವಾಹನ ನಿಲುಗಡೆ
ಕೆ.ಹೆಚ್.ರಸ್ತೆ, ಶಾಂತಿನಗರ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದ ಮೇಲೆ ನಾಲ್ಕು ಚಕ್ರದ ವಾಹನ ನಿಲುಗಡೆ
ಡಾ.ಮರಿಗೌಡ ರಸ್ತೆ- ಹಾಪ್ ಕಾಮ್ಸ್ ನಲ್ಲಿ ದ್ವಿ ಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ
ಜೆ.ಸಿ. ರಸ್ತೆ ಕಾರ್ಪೊರೇಷನ್ ಪಾರ್ಕಿಂಗ್ ಸ್ಥಳದಲ್ಲಿ ದ್ವಿ ಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ

ವಾಹನಗಳ ನಿಲುಗಡೆ ನಿಷೇಧಿಸಿರುವ ರಸ್ತೆಗಳು
ಡಾ. ಮರಿಗೌಡ ರಸ್ತೆ,ಲಾಲ್ ಬಾಗ್ ಮುಖ್ಯ ದ್ವಾರದಿಂದ ನಿಮ್ಹಾನ್ಸ್ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ
ಕೆ.ಹೆಚ್.ರಸ್ತೆ, ಕೆ.ಹೆಚ್.ವೃತ್ತದಿಂದ ಶಾಂತಿನಗರ ಜಂಕ್ಷನ್ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ
ಲಾಲ್‌ ಬಾಗ್ ರಸ್ತೆ, ಸುಬ್ಬಯ್ಯ ವೃತ್ತದಿಂದ ಲಾಲ್‌ ಬಾಗ್ ಮುಖ್ಯದ್ವಾರದ ವರೆಗೆ
ಸಿದ್ದಯ್ಯ ರಸ್ತೆ, ಊರ್ವಶಿ ಥಿಯೇಟರ್ ಜಂಕ್ಷನ್ ನಿಂದ ವಿಲ್ಸನ್ ಗಾರ್ಡನ್ 12ನೇ ಕ್ರಾಸ್ ವರೆಗೆ
ಬಿ.ಎಂ.ಟಿ.ಸಿ ರಸ್ತೆಯಲ್ಲಿ, ರಸ್ತೆಯ ಎರಡೂ ಬದಿಗಳಲ್ಲಿ
ಲಾಲ್ ಬಾಗ್ ವೆಸ್ಟಿಗೇಟ್‌ನಿಂದ ಆರ್.ವಿ. ಟೀಚರ್ ಕಾಲೇಜ್‌ವರೆಗೆ
ಆರ್ ವಿ ಟೀಚರ್ ಕಾಲೇಜ್‌ನಿಂದ ಆಶೋಕ ಪಿಲ್ಲರ್ ವರೆಗೆ
ಅಶೋಕ ಪಿಲ್ಲರ್‌ನಿಂದ ಸಿದ್ದಾಪುರ ಜಂಕ್ಷನ್‌ ವರೆಗೆ

ಡಾ.ಮರೀಗೌಡ ರಸ್ತೆ, ಲಾಲ್‌ ಬಾಗ್ ರಸ್ತೆ, ಕೆ.ಹೆಚ್. ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಸಾಧ್ಯತೆ ಹಿನ್ನೆಲೆ ಸಾರ್ವಜನಿಕರು ಸಾಧ್ಯವಾದಷ್ಟು ಸಮೂಹ ಸಾರಿಗೆ ವ್ಯವಸ್ಥೆ ಬಳಸಲು ಮನವಿ ಮಾಡಲಾಗಿದೆ. ಬಿಎಂಟಿಸಿ ಬಸ್‌, ಮೆಟ್ರೋ, ಕ್ಯಾಬ್‌ಗಳನ್ನು ಬಳಸಲು ಸೂಚಿಸಲಾಗಿದೆ.

200 ಸಿಸಿಟಿವಿ ಅಳವಡಿಕೆ, 400ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ನಿಯೋಜನೆ
ಫಲಪುಷ್ಪ ಪ್ರದರ್ಶನಕ್ಕೆ ಟಿಕೆಟ್ ನಿಗದಿ ಮಾಡಲಾಗಿದ್ದು, ವಯಸ್ಕರಿಗೆ ವಾರದ ದಿನಗಳಲ್ಲಿ 70 ರೂಪಾಯಿ ಹಾಗೂ ವಾರದ ಕೊನೆಯಲ್ಲಿ 80 ರೂಪಾಯಿ ಹಾಗೂ ಮಕ್ಕಳಿಗೆ 30 ರೂಪಾಯಿ ಇದೆ. ಜೊತೆಗೆ ಶಾಲಾ ಮಕ್ಕಳು ಶಾಲೆಯ ಯೂನಿಫಾರ್ಮ್ ಹಾಗೂ ಐಡಿ ಕಾರ್ಡ್ ಜೊತೆಗೆ ಬಂದರೆ ಉಚಿತ ಪ್ರವೇಶ ಪಡೆಯಬಹುದು. ಇನ್ನು ಭದ್ರತೆ ದೃಷ್ಟಿಯಿಂದ 200 ಸಿಸಿಟಿವಿ ಅಳವಡಿಕೆ ಮಾಡುವುದರ ಜೊತೆಗೆ 400ಕ್ಕೂ ಅಧಿಕ ಭದ್ರತಾ ಸಿಬ್ಬಂದಿಗಳನ್ನೂ ನಿಯೋಜಿಸಲಾಗಿದೆ. 

SCROLL FOR NEXT