ರಾಜ್ಯ

ಬೆಂಗಳೂರು: ಆತ್ಮಹತ್ಯೆಗೆ ಮುನ್ನ ಪತ್ನಿ, ಪುತ್ರಿಯರ ಶವದೊಂದಿಗೆ ಮೂರು ದಿನ ಕಳೆದ ಟೆಕ್ಕಿ; ಷೇರು ಹೂಡಿಕೆಯಿಂದ ನಷ್ಟ ಕಾರಣ!

Manjula VN

ಬೆಂಗಳೂರು: ಕಾಡುಗೋಡಿಯಲ್ಲಿ ಇಬ್ಬರು ಮಕ್ಕಳು, ಹೆಂಡತಿಯನ್ನ ಹತ್ಯೆಗೈದ ಟೆಕ್ಕಿಯೊಬ್ಬ ನಂತರ ತಾನೂ ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಬೆಚ್ಚಿಬೀಳಿಸುವ ಹಲವು ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ.

31 ವರ್ಷದ ಟೆಕ್ಕಿ ವೀರಾರ್ಜುನ ವಿಜಯ್, ಪತ್ನಿ ಹೇಮಾವತಿ (29) ಮತ್ತು ಅವರ ಇಬ್ಬರು ಹೆಣ್ಣುಮಕ್ಕಳಾದ ಒಂದೂವರೆ ವರ್ಷದ ಮೋಕ್ಷ ಮೇಘ ನಯನ ಮತ್ತು 8 ತಿಂಗಳ ಮಗು ಸುನಯನಾ ಅವರನ್ನು ಕಾಡುಗೋಡಿಯ ಸೀಗೇಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಹತ್ಯೆ ಮಾಡಿದ್ದ. ಪ್ರಕರಣ ಗುರುವಾರ ಬೆಳಕಿಗೆ ಬಂದಿತ್ತು.

ಪ್ರಕರಣದ ತನಿಖೆ ಕೈಗೊತ್ತಿಕೊಂಡ ಪೊಲೀಸರಿಗೆ, ವಿಜಯ್ ಪತ್ನಿಯನ್ನು ಜುಲೈ 31 ರಂದೇ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ. ಮೊದಲಿಗೆ ಹೆಂಡತಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ಕಂಡು ಬಂದಿದೆ.

ಪತ್ನಿಯ ಹತ್ಯೆ ಮಾಡಿ 24 ಗಂಟೆಗಳ ಬಳಿಕ ಮಕ್ಕಳು ಹಾಗೂ ಹೆಂಡತಿ ಶವದ ಜೊತೆಗೆ ಕಾಲ ಕಳೆದ ವಿಜಯ್, ನಂತರ ಮಕ್ಕಳು ಅಳುವುದನ್ನು ನೋಡಿ ಕೊನೆಗೆ ತನ್ನ ಇಬ್ಬರೂ ಮಕ್ಕಳ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಪತ್ನಿ, ಮಕ್ಕಳ ಶವಗಳ ಜೊತೆಗೆ 3 ದಿನಗಳ ಕಾಲ ಕಳೆದ ಬಳಿಕ ಆಗಸ್ಟ್ 2 ರಂದು ಸೀಲಿಂಗ್ ಫ್ಯಾನ್'ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಮೊದಲಿಗೆ ಮಹಿಳೆ ಹಾಗೂ ಮಕ್ಕಳ ಶವಗಳು ನೆಲದ ಮೇಲೆ ಬಿದ್ದಿರುವುದು ಪತ್ತೆಯಾಗಿದೆ. ವಿಜಯ್ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಹಿಳೆಯ ಮೃತದೇಹ ಡಿ ಕಾಂಪೋಸ್ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಉಳಿದ ಮೂವರ ಮೃತದೇಹಗಳು ಇನ್ನೂ ಡಿಕಾಂಪೋಸ್ ಸ್ಥಿತಿಗೆ ತಲುಪಿರಲಿಲ್ಲ ಎಂಬುದು ತಿಳಿದುಬಂದಿದೆ.

ಕುಟುಂಬದ ಅಂತ್ಯಕ್ಕೆ ಸಾಲಬಾಧೆ ಕಾರಣ...
ಈ ನಡುವೆ ವಿಜಯ್ ಅವರಿಗೆ ಸೇರಿದ ಮೊಬೈಲ್ ಹಾಗೂ ಲ್ಯಾಪ್ ಟಾಪ್ ನ್ನು ಪರಿಶೀಲನೆ ನಡೆಸಿದ ಪೊಲೀಸರಿಗೆ ದುರ್ಘಟನೆಗೆ ಸಾಲಬಾಧೆ ಕಾರಣ ಎಂಬುದಾಗಿ ತಿಳಿದುಬಂದಿದೆ.

ಮೃತ ವಿಜಯ್ ಟೆಕ್ಕಿ ಕುಂದಲಹಳ್ಳಿಯಲ್ಲಿರುವ ಸಾಫ್ಟ್‌ವೇರ್ ಕಂಪನಿಯಲ್ಲಿ ಟೀಮ್ ಲೀಡ್ ಆಗಿ ಕೆಲಸ ಮಾಡುತ್ತಿದ್ದು, ಕೆಲ ವರ್ಷಗಳ ಹಿಂದೆ ಸಾಲ ಮಾಡಿ ಷೇರುಗಳಲ್ಲಿ ಹೂಡಿಕೆ ಮಾಡಿದ್ದಾನೆ. ಆದರೆ, ನಷ್ಟ ಎದುರಾದ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಆದರೆ, ಈ ವಿಚಾರವನ್ನು ಕುಟುಂಬದ ಯಾವುದೇ ಸದಸ್ಯರೊಂದಿಗೆ ಹಂಚಿಕೊಂಡಿರಲಿಲ್ಲ. ಈ ನಡುವೆ ವಿಚಾರ ತಿಳಿದ ಪತ್ನಿ ಈ ಬಗ್ಗೆ ಜಗಳ ಮಾಡಿದ್ದಾಳೆ. ಈ ವೇಳೆ ಆರ್ಥಿಕ ನಷ್ಟದ ಒತ್ತಡ ತಾಳರಾದೆ ವಿಜಯ್ ಪತ್ನಿಯನ್ನು ಹತ್ಯೆ ಮಾಡಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯ್ ಪತ್ನಿ ಮೊದಲಿಗೆ ಸಾವನ್ನಪ್ಪಿರುವುದಾಗಿ ಎಫ್ಎಸ್ಎಲ್ ವರದಿಗಳೂ ಕೂಡ ಬಹಿರಂಗಪಡಿಸಿವೆ.

SCROLL FOR NEXT