ರಾಜ್ಯ

ಚೆನ್ನೈ: ಬೈಕ್‌ ರೇಸ್‌ ವೇಳೆ ದುರ್ಘಟನೆ; ಬೆಂಗಳೂರಿನ 13 ವರ್ಷದ ರೇಸರ್ ಶ್ರೇಯಸ್ ಹರೀಶ್ ದುರ್ಮರಣ!

Manjula VN

ಚೆನ್ನೈ: ಚೆನ್ನೈನ ಮದ್ರಾಸ್ ಅಂತರರಾಷ್ಟ್ರೀಯ ಸರ್ಕಿಟ್‌ (ಎಂಐಸಿ) ನಲ್ಲಿ  ಆಯೋಜಿಸಲಾಗಿದ್ದ ಎಂಆರ್‌ಎಫ್‌ ಇಂಡಿಯನ್ ನ್ಯಾಷನಲ್ ಮೋಟರ್‌ಸೈಕಲ್ ರೇಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿದ್ದ ಬೆಂಗಳೂರಿನ 13 ವರ್ಷದ ಬೈಕ್ ರೇಸರ್ ಶ್ರೇಯಸ್ ಹರೀಶ್, ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾನೆ.

ಶನಿವಾರ ನಡೆದ ಸ್ಪರ್ಧೆಯಲ್ಲಿ ಹರೀಶ್ ಮುಂಚೂಣಿಯಲ್ಲಿ ಸಾಗುತ್ತಿದ್ದರು. ಈ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಲ್ಲಿ ಶ್ರೇಯಸ್ ದುರಂತ ಸಾವಿಗೀಡಾಗಿದ್ದಾನೆ.

ಬೆಂಗಳೂರಿನ ಕೆನ್ಸರಿ ಶಾಲೆಯ ವಿದ್ಯಾರ್ಥಿ ಶ್ರೇಯಸ್, ಉದಯೋನ್ಮುಖ ಸ್ಪರ್ಧಿಗಳ ವಿಭಾಗದಲ್ಲಿ ಟಿವಿಎಸ್‌ ಒನ್‌ ಮೇಕ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದ.

‘ತಿರುವಿನಲ್ಲಿ ಆಯ ತಪ್ಪಿದ ಬೈಕ್ ಉರುಳಿ ಬಿದ್ದಿದೆ. ಅದೇ ಹೊತ್ತಿನಲ್ಲಿ ಶ್ರೇಯಸ್ ಧರಿಸಿದ್ದ ಹೆಲ್ಮೆಟ್ ಲಾಕ್ ಕಳಚಿದೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಮತ್ತೊಬ್ಬ ಸ್ಪರ್ಧಿಯ ಬೈಕ್ ಶ್ರೇಯಸ್ ಮೇಲೆ ಹರಿದು ಮುಂದೆ ಸಾಗಿದೆ ಎಂದು ತಿಳಿದುಬಂದಿದೆ.

ಕೂಡಲೇ ರೇಸ್ ಸ್ಥಗಿತಗೊಳಿಸಿದ ಆಯೋಜಕರು ಶ್ರೇಯಸ್ ನನ್ನು ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆ ತಲುವ ವೇಳೆ ಶ್ರೇಯಸ್ ಮಾರ್ಗದ ಮಧ್ಯೆಯೇ ಕೊನೆಯುಸಿರೆಳೆದಿದ್ದು, ಈ ಸಂದರ್ಭದಲ್ಲಿ ಶ್ರೇಯಸ್ ತಂದೆ ಹರೀಶ್ ಪರಂಧಾಮನ್ ಕೂಡ ಜೊತೆಯಲ್ಲಿಯೇ ಇದ್ದರು ಎಂದು ತಿಳಿದುಬಂದಿದೆ.

ದುರಂತ ಘಟನೆಯ ನಂತರ, ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಶನಿವಾರ ಮತ್ತು ಭಾನುವಾರದಂದು ನಿಗದಿಯಾಗಿದ್ದ ಉಳಿದ ರೇಸ್‌ಗಳನ್ನು ರದ್ದುಗೊಳಿಸಿದೆ.

2010 ಜುಲೈ 26ರಂದು ಜನಿಸಿದ ಶ್ರೇಯಸ್,  ಬೆಂಗಳೂರಿನ ಕೆನ್ಸ್ರಿ ಶಾಲೆಯ ವಿದ್ಯಾರ್ಥಿ. ಈತ ಪೆಟ್ರೋನಾಸ್‌ ಟಿವಿಎಸ್ ಒನ್-ಮೇಕ್ ಚಾಂಪಿಯನ್‌ಶಿಪ್ ಹೊಸಬರ ವಿಭಾಗದಲ್ಲಿ ಸ್ಪರ್ಧಿಸಿ ಸತತ ನಾಲ್ಕು ಬಾರಿ ಗೆದ್ದಿದ್ದು ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ರೇಸ್‌ಗಳನ್ನು ಗೆದ್ದ ಕಾರಣ ಉದಯೋನ್ಮುಖ ತಾರೆ ಎಂದು ಪ್ರಶಂಸಿಸಲ್ಪಟ್ಟರು.

"ಇಷ್ಟು ಯುವ ಮತ್ತು ಪ್ರತಿಭಾವಂತ ರೈಡರ್ ಅನ್ನು ಕಳೆದುಕೊಂಡಿರುವುದು ದುರಂತ. ತನ್ನ ಅದ್ಭುತ ರೇಸಿಂಗ್ ಪ್ರತಿಭೆಯಿಂದ ಅಲೆಗಳನ್ನು ಎಬ್ಬಿಸುತ್ತಿದ್ದ. ಘಟನೆ ಸಂಭವಿಸುತ್ತಿದ್ದಂತೆಯೇ ಕೂಡಲೇ ಎಲ್ಲಾ ರೀತಿಯ ವೈದ್ಯಕೀಯ ನೆರವು ನೀಡಲಾಯಿತು. ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು MMSC ಅಧ್ಯಕ್ಷ ಅಜಿತ್ ಥಾಮಸ್ ಹೇಳಿದ್ದಾರೆ.

ಘಟನೆ ಬಳಿಕ ವಾರಾಂತ್ಯದ ಉಳಿದ ಕಾರ್ಯಕ್ರಮವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ಶ್ರೇಯಸ್ ಕುಟುಂಬಕ್ಕೆ ಸಂತಾಪವನ್ನು ಸೂಚಿಸುತ್ತೇವೆಂದು ತಿಳಿಸಿದ್ದಾರೆ.

ಈ ವರ್ಷದ ಮೇ ತಿಂಗಳಲ್ಲಿ, MiniGP India ಪ್ರಶಸ್ತಿಯನ್ನು ಗೆದ್ದ ಶ್ರೇಯಸ್, ಸ್ಪೇನ್‌ನಲ್ಲಿ ನಡೆದ ಮಿನಿಜಿಪಿ ರೇಸ್‌ಗಳಲ್ಲಿ ಭಾಗವಹಿಸಿದ್ದರು, ಎರಡೂ ರೇಸ್‌ಗಳನ್ನು ಕ್ರಮವಾಗಿ ಐದು ಮತ್ತು ನಾಲ್ಕನೇ ಸ್ಥಾನಗಳಲ್ಲಿ ಗಳಿಸಿದ್ದರು. ಈತ ಆಗಸ್ಟ್‌ನಲ್ಲಿ ಮಲೇಷ್ಯಾದ ಸೆಪಾಂಗ್ ಸರ್ಕ್ಯೂಟ್‌ನಲ್ಲಿ MSBK ಚಾಂಪಿಯನ್‌ಶಿಪ್ 2023 ನಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದರು.

SCROLL FOR NEXT