ರಾಜ್ಯ

ಬಿಬಿಎಂಪಿ ಕಚೇರಿಯಲ್ಲಿ ಅಗ್ನಿ ಅವಘಡ: ಗಾಯಾಳುಗಳಿಗೆ ಶೇ.35-40ರಷ್ಟು ಸುಟ್ಟ ಗಾಯ, ಸ್ಥಿತಿ ಗಂಭೀರ

Manjula VN

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿ ಆವರಣದ ಕಟ್ಟದಲ್ಲಿರುವ ಗುಣನಿಯಂತ್ರಣ ಪ್ರಯೋಗಾಲಯದಲ್ಲಿ ಶುಕ್ರವಾರ ಸಂಭವಿಸಿದ ಅಗ್ನಿ ಅವಘಡ ಘಟನೆಯಲ್ಲಿ ಗಾಯಗೊಂಡವರು ಶೇ.35-40ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಶುಕ್ರವಾರ ಸಂಜೆ ಬಿಬಿಎಂಪಿ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದ ನೆಲ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಂಬತ್ತು ಮಂದಿ ಗಾಯಗೊಂಡಿದ್ದರು.

ಕೂಡಲೇ ಗಾಯಾಳುಗಳನ್ನು ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಗೆ ದಾಖಲಿಸಲಾಗಿತ್ತು. ನಂತರ ವಿಕ್ಟೋರಿಯಾ ಆಸ್ಪತ್ರೆಯ ಮಹಾಬೋಧಿ ಸುಟ್ಟಗಾಯಗಳ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು.

ಗಾಯಾಳುಗಳು ಶೇ.35-40ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಆರೋಗ್ಯ ಸ್ಥಿರವಾಗಿದೆ. ಆದರೆ, ಮುಂದಿನ 48 ಗಂಟೆಗಳ ಕಾಲ ಯಾವುದನ್ನು ಖಚಿತಪಡಿಸಲಾಗಲು ಎಂದು ವೈದ್ಯರು ತಿಳಿಸಿದ್ದಾರೆ.

ಕೆಲವರು ಆಳವಾದ ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ. 9 ಮಂದಿಯ ಪೈಕಿ ಮೂವರಿಗೆ ಮುಖದ ಮೇಲೆ ಸುಟ್ಟ ಗಾಯಗಳಾಗಿವೆ. ಮುಂದಿನ 48ರಿಂದ 72 ಗಂಟೆಗಳ ಎಲ್ಲಾ ಗಾಯಾಳುಗಳ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜಿನ ಡೀನ್ ಮತ್ತು ನಿರ್ದೇಶಕ ಡಾ ರಮೇಶ್ ಕೃಷ್ಣ ತಿಳಿಸಿದ್ದಾರೆ.

ಎಲ್ಲಾ ಗಾಯಾಳುಗಳನ್ನೂ ವಾರ್ಡ್‌ಗಳಿಗೆ ಶಿಫ್ಟ್ ಮಾಲಾಗಿದೆ. ನೋವಿಗಾಗಿ ಇಂಟ್ರಾವೆನಸ್ ದ್ರವ ಮತ್ತು ಔಷಧಿಗಳನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಗಾಯಾಳುಗಳಿಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು: ಸಚಿವ ಕೆಜೆ ಜಾರ್ಜ್
ಈ ನಡುವೆ ಘಟನೆ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್ ಅವರು, ಸಂತ್ರಸ್ತರು ಅಪಾಯದಿಂದ ಪಾರಾಗಿದ್ದಾರೆ. ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಗಾಯಾಳುಗಳಿಗೆ ಅಗತ್ಯವಿರುವ ಎಲ್ಲಾ ರೀತಿ ನೆರವನ್ನೂ ನೀಡಲಾಗುತ್ತಿದೆ. ರೋಗಿಗಳ ಚಿಕಿತ್ಸೆಗೆ ಮೊದಲು ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ಇದೇ ವೇಳೆ ಭ್ರಷ್ಟಾಚಾರ ಆರೋಪಗಳ ಕುರಿತ ಸಾಕ್ಷ್ಯಾಧಾರಗಳ ನಾಶಪಡಿಸಲು ಬೆಂಕಿ ಹಚ್ಚಲಾಗಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿದರು.

ಅಗ್ನಿ ಅವಘಡ ಸಂಬಂಧ ಪೊಲೀಸ್, ವಿಧಿವಿಜ್ಞಾನ ವಿಭಾಗ ಮತ್ತು ಬಿಬಿಎಂಪಿಯಿಂದ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬರುವವರೆಗೆ ಕಾಯುತ್ತೇವೆ ಎಂದು ಹೇಳಿದರು.

SCROLL FOR NEXT