ರಾಜ್ಯ

ಚಾಮರಾಜನಗರ: ಮುತ್ತಯ್ಯ ಮುರಳೀಧರನ್ ಮಾಲೀಕತ್ವದಲ್ಲಿ ಪಾನೀಯ ಉತ್ಪಾದನಾ ಘಟಕ ಸ್ಥಾಪನೆ!

Nagaraja AB

ಚಾಮರಾಜನಗರ: ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರು ಚಾಮರಾಜನಗರದಲ್ಲಿ ಪ್ರಮುಖ ಉದ್ಯಮವನ್ನು ಸ್ಥಾಪಿಸುವ ಮೂಲಕ ಕೈಗಾರಿಕೋದ್ಯಮಿಯಾಗಲಿದ್ದಾರೆ. ಇವರು 46 ಎಕರೆ ಭೂಮಿಯಲ್ಲಿ ಪಾನೀಯ ಉತ್ಪಾದನಾ ಘಟಕ ನಿರ್ಮಿಸುವ ಗುರಿ ಹೊಂದಿದ್ದಾರೆ. ಆ ಮೂಲಕ ಮೊದಲ ಹಂತದಲ್ಲಿ 800 ಕ್ಕೂ ಹೆಚ್ಚು ವ್ಯಕ್ತಿಗಳಿಗೆ ಉದ್ಯೋಗವಕಾಶವನ್ನು ಕಲ್ಪಿಸುತ್ತಿದ್ದಾರೆ. 

ಕೆಲ್ಲಂಬಳ್ಳಿ ಇಂಡಸ್ಟ್ರಿಯಲ್ ಏರಿಯಾದ ಬದನಗುಪ್ಪೆಯಲ್ಲಿ ಎಂ/ಎಸ್ ಮುತ್ತಯ್ಯ ಬೆವರೇಜ್ ಅಂಡ್ ಕಾನ್ಪೆಕ್ಸನರಿ ಪ್ರೈವೇಟ್ ಲಿಮಿಟೆಡ್‌ಗೆ ಕರ್ನಾಟಕ ಸರ್ಕಾರದಿಂದ ಭೂಮಿ ಮಂಜೂರಾಗಿದ್ದು, ಮುರಳೀಧರನ್ ಉದ್ಯಮದ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಇದರಿಂದಾಗಿ  ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಕೈಗಾರಿಕಾ ಬೆಳವಣಿಗೆಯನ್ನು ವಿಸ್ತರಿಸಲಿದೆ. 

ಮುತ್ತಯ್ಯ ಮುರಳೀಧರನ್ ಶ್ರೀಲಂಕಾದ ಸಿಲೋನ್ ಬೆವರೇಜ್ ಕ್ಯಾನ್ (ಪ್ರೈ) ಲಿಮಿಟೆಡ್‌ನೊಂದಿಗೆ ತಂಪು ಪಾನೀಯ ಉತ್ಪಾದನೆಯ ಯೋಜನಾ ವರದಿಯನ್ನು ಸಲ್ಲಿಸಿದರು. ಇದಕ್ಕೆ ಕರ್ನಾಟಕ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಅಧಿಕಾರಿಗಳು ಸಹ 46.30 ಎಕರೆ ಗುತ್ತಿಗೆ ಮಂಜೂರು ಮಾಡಿದ್ದಾರೆ. 900 ಎಕರೆ ಕೈಗಾರಿಕಾ ಪ್ರದೇಶ ಹೊಂದಿರುವ ಬದನಗುಪ್ಪೆಯಲ್ಲಿ ಮುಂದಿನ ವರ್ಷ ಜೂನ್ ಅಥವಾ ಜುಲೈ ವೇಳೆಗೆ ಉತ್ಪಾದನೆ ಆರಂಭವಾಗುವ ನಿರೀಕ್ಷೆ ಇದೆ.

ಈ ಕುರಿತು ಮಾತನಾಡಿದ ಕೈಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜೇಂದ್ರ ಪ್ರಸಾದ್ ಚಾಮರಾಜನಗರ ಹಾಗೂ ರಾಜ್ಯಾದ್ಯಂತ ಕೈಗಾರಿಕೆಗಳಿಂದ ಭೂಮಿಗೆ ಹೆಚ್ಚಿನ ಬೇಡಿಕೆ ಇದೆ. ಕೆಐಎಡಿಬಿ ನೀರು ಪೂರೈಸಿ ವಿದ್ಯುತ್ ಕೇಂದ್ರ ಸ್ಥಾಪಿಸಿರುವುದರಿಂದ ಒಂದು ವರ್ಷದಲ್ಲಿ ಪ್ರಮುಖ ಕೈಗಾರಿಕೆ ರೂಪುಗೊಳ್ಳುವುದು ಶುಭ ಸೂಚನೆ ಎಂದರು.

ಜವಳಿ ಘಟಕವಾದ ಕಲಾರ್ ಟೊನ್ 700 ಉದ್ಯೋಗಿಗಳನ್ನು ನೇಮಿಸಿಕೊಂಡು ಉತ್ಪಾದನೆಯನ್ನು ಪ್ರಾರಂಭಿಸಿದ್ದರೆ  ಬಿರ್ಲಾ ಗ್ರೂಪ್, ಕೆಸಿಎಂ ಗೃಹೋಪಯೋಗಿ ಘಟಕ ಕೂಡಾ ತಮ್ಮ ಉದ್ಯಮದ ನಿರ್ಮಾಣವನ್ನು ತ್ವರಿತಗೊಳಿಸಿವೆ.
ಗಡಿ ಜಿಲ್ಲೆಯ ನಿರುದ್ಯೋಗ ಅಂಶವನ್ನು ಪರಿಹರಿಸುವ ಕೈಗಾರಿಕೀಕರಣವು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರಿಂದ ಬದನಗುಪ್ಪೆ ಕೈಗಾರಿಕಾ ಪ್ರದೇಶವು ಜನರ ಭರವಸೆಯನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು.

SCROLL FOR NEXT