ಬೆಂಗಳೂರು: ಪಾಲಿಕೆ ಕೇಂದ್ರ ಕಚೇರಿಯ ಕ್ವಾಲಿಟಿ ಕಂಟ್ರೋಲ್ ಲ್ಯಾಬ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರದಿಂದ ತನಿಖೆ ಆರಂಬವಾಗಲಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿಯೋಜಿತ ಅಧಿಕಾರಿ ಬಿ.ಎಸ್.ಪ್ರಹ್ಲಾದ್ ಅವರು ಬುಧವಾರ ಹೇಳಿದ್ದಾರೆ.
ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗ್ನಿ ಅವಘಡಕ್ಕೆ ಕಾರಣ ತಿಳಿಯಲು ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಲು ಸೀಲ್ ಆಗಿದ್ದ ಲ್ಯಾಬ್'ನ್ನು ಪೊಲೀಸ್ ಉಪಸ್ಥಿತಿಯಲ್ಲಿ ತೆರೆಯಲಾಗಿದೆ. ಗುರುವಾರದಿಂದ ತನಿಖೆ ಆರಂಭವಾಗಲಿದೆ ಎಂದು ಹೇಳಿದರು.
ಘಟನೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿ, ತಾಂತ್ರಿಕ ಲೋಪದೋಷಗಳನ್ನು ಪರಿಶೀಲಿಸಿ ಆಗಸ್ಟ್ 30 ರೊಳಗೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ವರದಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.
ದಾಖಲೆಗಳ ವಿಚಾರವಾಗಿ ಮಾತನಾಡಿ, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಲಾಗುವುದು, ಪೊಲೀಸರಿಗೂ ದಾಖಲೆಗಳನ್ನು ನೀಡಲಾಗುವುದು ಎಂದರು.
ಆಂತರಿಕ ವರದಿ ಸಿದ್ಧಪಡಿಸುವ ತಂಡದಲ್ಲಿ ಇಬ್ಬರು ಬಿಬಿಎಂಪಿ ಎಂಜಿನಿಯರ್‌ಗಳು ಮತ್ತು ಖಾಸಗಿ ಪ್ರಯೋಗಾಲಯದ ನಿರ್ವಹಣಾ ತಜ್ಞರೂ ಇರಲಿದ್ದಾರೆ. ಪೊಲೀಸರು ಕೂಡ ಘಟನೆಯ ತನಿಖೆಯನ್ನು ಆರಂಭಿಸಲಿದ್ದಾರೆಂದು ಮೂಲಗಳು ತಿಳಿಸಿವೆ.
ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯಲಾಗುತ್ತಿದ್ದು, ವರದಿ ಸಿಕ್ಕ ಕೂಡಲೇ ತನಿಖೆ ಪ್ರಾರಂಬವಾಗಲಿದೆ ಎಂದು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎನ್ ಸತೀಶ್ ಕುಮಾರ್ ಅವರು ಹೇಳಿದ್ದಾರೆ.