ರಾಜ್ಯ

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡುವಂತೆ ಒತ್ತಾಯ

Manjula VN

ಹುಬ್ಬಳ್ಳಿ: ಗಣೇಶ ಚತುರ್ಥಿ ಹಬ್ಬ ಹತ್ತಿರ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ನಗರದ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅವಕಾಶ ನೀಡಬೇಕೆಂಬ ಆಗ್ರಹಗಳು ವ್ಯಕ್ತವಾಗತೊಡಗಿವೆ.

ಮೊದಲ ವರ್ಷ ಗಣೇಶಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ಕೋರಿ 5 ಅರ್ಜಿಗಳು ಸಲ್ಲಿಕೆಯಾಗಿದ್ದವು. ಆಗ ಗಜಾನನ ಉತ್ಸವ ಮಹಾಮಂಡಳಿಗೆ ಅವಕಾಶ ನೀಡಲಾಗಿತ್ತು. ಎಲ್ಲಾ ಸಮಿತಿಗಳು ಒಂದುಗೂಡಿ ಮೂರು ದಿನ ಸಂಭ್ರಮದಿಂದ ಉತ್ಸವ ಆಚರಿಸಿದ್ದವು. ಈ ಬಾರಿ ಕೂಡ ಮತ್ತೆ ಮನವಿ ಸಲ್ಲಿಸಲು ಮುಂದಾಗಿವೆ.

ಎಚ್‌ಡಿಎಂಸಿ (ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ) ಆಯುಕ್ತರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದ ಮಹಾಮಂಡಳವು ನಗರದ ಹೃದಯ ಭಾಗದಲ್ಲಿರುವ ವಿವಾದಿತ ಸ್ಥಳದಲ್ಲಿ 11 ದಿನಗಳ ಕಾಲ ಗಣೇಶ ಉತ್ಸವವನ್ನು ಆಚರಿಸಲು ಅನುಮತಿ ನೀಡುವಂತೆ ಕೋರಿದೆ.

ಮಹಾಮಂಡಲದ ತಂಡವೊಂದು ಎಚ್‌ಡಿಎಂಸಿ ಆಯುಕ್ತರು ಮತ್ತು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದೆ. ಮನವಿ ಪತ್ರದಲ್ಲಿ ವಿಗ್ರಹ ಪ್ರತಿಷ್ಠಾಪನೆಗೆ ಮಂಜೂರಾದ ಮೈದಾನದ ಭಾಗಕ್ಕೆ ಬಾಡಿಗೆ ನೀಡಲು ಸಿದ್ಧವಿರುವುದಾಗಿಯೂ ಮಹಾಮಂಡಲ ತಿಳಿಸಿದೆ.

ಬಾಡಿಗೆ ಮೊತ್ತವನ್ನು ಎಚ್‌ಡಿಎಂಸಿ ನಿಗದಿಪಡಿಸಬಹುದು ಎಲ್ಲಾ ಷರತ್ತುಗಳನ್ನು ಪಾಲನೆ ಮಾಡಲು ಸಿದ್ಧರಿದ್ದೇವೆಂದು ಹೇಳಿದೆ ಎಂದು ತಿಳಿದುಬಂದಿದೆ.

ಈ ನಡುವೆ ಪ್ರಮೋದ್ ಮುತಾಲಿಕ್ ಅವರು ಪ್ರತಿಕ್ರಿಯೆ ನೀಡಿ, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ನಮ್ಮ ಸಂಘಟನೆ ಬದ್ಧವಾಗಿದ್ದು, ಯಾವುದೇ ಶಕ್ತಿ ಇದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಶೀಘ್ರವೇ ಅನುಮತಿ ಹಾಗೂ ಸೂಕ್ತ ಭದ್ರತೆಗಾಗಿ ಎಚ್‌ಡಿಎಂಸಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ನಡುವೆ ರಾಣಿ ಚೆನ್ನಮ್ಮ ಮೈದಾನದ ಗಜಾನನ ಉತ್ಸವ ಸಮಿತಿ ಸದಸ್ಯರು ಬುಧವಾರ ಸಭೆ ಸೇರಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಕುರಿತು ಸಮಾಲೋಚನೆ ನಡೆಸಿದರು.

ಕಳೆದ ಬಾರಿ ಮೂರು ದಿನ ಮಾತ್ರ ಅನುಮತಿ ನೀಡಿದ್ದರಿಂದ ಈ ಬಾರಿ ಗಣೇಶ ಹಬ್ಬ ಆಚರಣೆ ಅವಧಿಯನ್ನು 11 ದಿನ ವಿಸ್ತರಿಸಲು ಎಚ್ ಡಿಎಂಸಿಯಿಂದ ಅನುಮತಿ ಪಡೆಯಲು ಸಭೆ ನಿರ್ಧಾರ ಕೈಗೊಂಡಿದೆ.

SCROLL FOR NEXT