ರಾಜ್ಯ

ಬ್ರ್ಯಾಂಡ್ ಬೆಂಗಳೂರು: 'ಶೈಕ್ಷಣಿಕ ಬೆಂಗಳೂರು'ಗಾಗಿ ನಾಗರೀಕರಿಂದ ಸಲಹೆ, ಅಭಿಪ್ರಾಯ ಸಂಗ್ರಹ

Manjula VN

ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಶೈಕ್ಷಣಿಕ ಬೆಂಗಳೂರು ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಸಭೆ ಬಿಬಿಎಂಪಿ ಕೇಂದ್ರ ಕಚೇರ ಆವರಣದಲ್ಲಿ ಸೋಮವಾರ ನಡೆಯಿತು. ಈ ವೇಳೆ ಮಹತ್ವದ ಸಲಹೆಗಳನ್ನು ಸ್ವೀಕರಿಸಲಾಯಿತು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು, ಬೆಂಗಳೂರನ್ನು ಜ್ಞಾನ ನಗರಿಯಾಗಿ ಪರಿವರ್ತಿಸುವುದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಲು ಮಕ್ಕಳಿಗೆ ತರಬೇತಿ ನೀಡುವುದು, ಮಕ್ಕಳಿಗೆ ಕ್ಲಸ್ಟರ್ ಶೈಕ್ಷಣಿಕ ಕೇಂದ್ರಗಳನ್ನು ತೆರೆಯುವುದು, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯಡಿಯಲ್ಲಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ ತರುವುದು ಮತ್ತು ಕೊಳೆಗೇರಿ ಮಕ್ಕಳಿಗೆ ಶಿಕ್ಷಣ ನೀಡಲು ಕ್ರಮಗಳನ್ನು ಕೈಗೊಳ್ಳುವುದರ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಉದ್ದೇಶಿಸಿ ಮಾತನಾಡಿದ ಪ್ರೀತಿ ಗೆಹ್ಲೋಟ್ ಅವರು, ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ 7 ವಿವಿಧ ವಿಷಯಗಳ ಕುರಿತು ಸಾರ್ವಜನಿಕರಿಂದ ಸಲಹೆ/ಅಭಿಪ್ರಾಯಗಳನ್ನು ಪಡೆದು ಅದನ್ನು ಶೈಕ್ಷಣಿಕ ಸಂಸ್ಥೆಗಳ ಪಾಲುದಾರಿಕೆಯೊಂದಿಗೆ ಕ್ರೋಡೀಕರಿಸಿ ವರದಿ ಸಿದ್ದಪಡಿಸಲಾಗುತ್ತಿದೆ. ಇದೀಗ ಹೊಸದಾಗಿ ಶೈಕ್ಷಣಿಕ ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಯೋಜನೆಯಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಹೇಳಿದರು.

ಶೈಕ್ಷಣಿಕ ಬೆಂಗಳೂರು ವಿಷಯವಾಗಿ ಬರುವಂತಹ ಸಲಹೆಗಳ ಜೊತೆ ಒಂದು ವಾರದೊಳಗಾಗಿ ವಿಚಾರ ಸಂಕಿರಣವನ್ನು ಏರ್ಪಡಿಸಿ ಅದರಲ್ಲಿ ಬಂದಂತಹ ಸಲಹೆಗಳನ್ನು ಕ್ರೋಢೀಕರಿಸಿ ವರದಿಯನ್ನು ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 3000 ಸಾವಿರ ಸರ್ಕಾರಿ ಶಾಲಾ-ಕಾಲೇಜುಗಳು ಹಾಗೂ ಪಾಲಿಕೆಯ ಒಡೆತನದ 166 ಶಾಲಾ-ಕಾಲೇಜುಗಳು ಇವೆ. ಈ ಎಲ್ಲಾ ಶಾಲಾ-ಕಾಲೇಜುಗಳನ್ನು ದತ್ತು ಪಡೆಯುವ ಸಲುವಾಗಿ ಉಪ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

SCROLL FOR NEXT