ರಾಜ್ಯ

ಎತ್ತಿನ ಹೊಳೆ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಲು 100 ದಿನಗಳ ಗಡುವು ನೀಡಿದ ಡಿಸಿಎಂ

Shilpa D

ಹಾಸನ: ಎತ್ತಿನಹೊಳೆ ಸಮಗ್ರ ನೀರು ಸರಬರಾಜು ಯೋಜನೆಯ ನಿಧಾನಗತಿಯ ಕಾಮಗಾರಿಗೆ ಅಸಮಾಧಾನ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ , ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ 100 ದಿನಗಳ ಗಡುವು ವಿಧಿಸಿದ್ದಾರೆ.

ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿಯಲ್ಲಿರುವ ಎತ್ತಿನಹೊಳೆ ಯೋಜನೆಯ ವಿದ್ಯುತ್ ಉಪ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಂದ ಮಾಹಿತಿ ಪಡೆದರು.ಡಿಸೆಂಬರ್‌ನೊಳಗೆ ಪ್ರಾಯೋಗಿಕವಾಗಿ ನೀರು ಹರಿಸುವಂತೆ ಎಂಜಿನಿಯರ್‌ಗಳಿಗೆ ಕಟ್ಟುನಿಟ್ಟಾಗಿ ತಿಳಿಸಲಾಗಿದೆ ಎಂದು ಅವರು ಹೇಳಿದರು.

ಎತ್ತಿನಹೊಳೆ ಯೋಜನೆಯ ಉದ್ದೇಶವೇನೆಂದರೆ ಪಶ್ಚಿಮ ಘಟ್ಟದ ನೀರನ್ನು ಕೋಲಾರದವರೆಗೆ ತೆಗೆದುಕೊಂಡು ಹೋಗುವುದು. ಆದರೆ ಈ ಯೋಜನೆಯಡಿ ಅನೇಕ ಸಮಸ್ಯೆಗಳಿದ್ದು, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಇಂಧನ ಇಲಾಖೆಗಳು, ಗುತ್ತಿಗೆದಾರರಿಗೆ ಸರಿಯಾದ ಕ್ರಮದಲ್ಲಿ ಕೆಲಸ ನಿರ್ವಹಣೆ ಮಾಡಲು ತೊಂದರೆಯಾಗುತ್ತಿದೆ. ಈ ಯೋಜನೆಗೆ ಕೆಲವರು ಜಾಗ ಬಿಟ್ಟುಕೊಡದೆ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಕೆಲವೊಂದು ಭಾಗದಲ್ಲಿ ಜಾಗದ ಕೊರತೆ ಉಂಟಾಗಿದ್ದು ಅದರ ಸಂಪೂರ್ಣ ಜವಾಬ್ದಾರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಹಿಸಿಕೊಂಡು ಸಹಕಾರ ನೀಡಬೇಕು. ಜೊತೆಗೆ ಜಿಲ್ಲಾಧಿಕಾರಿಯವರು ಯೋಜನೆಯನ್ನು ಶೀಘ್ರವೇ ಪೂರ್ಣಗೊಳಿಸಲು ಕ್ರಮವಹಿಸುವಂತೆ ಸೂಚಿಸಿದರು.

ಎತ್ತಿನಹೊಳೆ ಯೋಜನೆಯು ಎತ್ತಿನಹೊಳೆ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಿಕ್ಕಮಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಸೇರಿದಂತೆ ಏಳು ಜಿಲ್ಲೆಗಳ 29 ತಾಲ್ಲೂಕುಗಳಿಗೆ 24.1 ಟಿಎಂಸಿ ಅಡಿ ನೀರನ್ನು ಎತ್ತಿನಹೊಳೆ, ಕಾಡುಮನೆ, ಕಿರಿಹೊಳೆ ಮತ್ತು ಹೊಂಗಡಹಳ್ಳ ಮತ್ತು ನೇತ್ರ ನದಿಯ ಉಪನದಿಗಳಾದ ಕುಮಾರಾವತಿ ನದಿಗಳಿಂದ ನೀರನ್ನು ಒದಗಿಸುವ ಗುರಿಯನ್ನು ಹೊಂದಿದೆ. ಯೋಜನೆಯ ಅಂದಾಜು ವೆಚ್ಚ 23,250 ಕೋಟಿ ಆಗಿದ್ದು, ಸರಕಾರ ಈಗಾಗಲೇ 14,500 ಕೋಟಿ ರೂ. ಹಣ ವೆಚ್ಚ ಮಾಡಿದೆ.

ಭೂಸ್ವಾಧೀನ ಹಾಗೂ ಅರಣ್ಯ ಒತ್ತುವರಿ ಸಮಸ್ಯೆಯಿಂದ ಯೋಜನೆ ಮಂದಗತಿಯಲ್ಲಿ ಸಾಗುತ್ತಿದೆ. ಗ್ರಾಮಸ್ಥರು, ರೈತರು ಮತ್ತು ಕಾಫಿ ಬೆಳೆಗಾರರು ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕು ಮತ್ತು ಯಾರಾದರೂ ಯೋಜನೆಗೆ ಅಡ್ಡಿಪಡಿಸಲು ಪ್ರಯತ್ನಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು  ಶಿವಕುಮಾರ್ ಹೇಳಿದರು.

ಹಿಂದಿನ ಸರ್ಕಾರ ಆಸಕ್ತಿ ವಹಿಸಿದ್ದರೆ ಇಷ್ಟೊತ್ತಿಗೆ ಯೋಜನೆ ಪೂರ್ಣಗೊಳ್ಳುತ್ತಿತ್ತು, ಯೋಜನೆಯ ಮೇಲ್ವಿಚಾರಣೆಗಾಗಿ ಪ್ರತಿ ತಿಂಗಳು ಪರಿಶೀಲನಾ ಸಭೆ ನಡೆಸಲು ಯೋಜಿಸುತ್ತಿರುವುದಾಗಿ ತಿಳಿಸಿದರು. ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಯನ್ನು ರಾಜಕೀಯ ಪ್ರೇರಿತ ಎಂದು ಬಣ್ಣಿಸಿದ ಅವರು, ಕರ್ನಾಟಕ ಈಗಾಗಲೇ ನೆರೆ ರಾಜ್ಯಕ್ಕೆ 24 ಟಿಎಂಸಿ ಅಡಿ ಬಿಡುಗಡೆ ಮಾಡಿದ್ದು, 8 ಟಿಎಂಸಿ ಅಡಿ ಬಾಕಿ ಉಳಿದಿದೆ ಎಂದರು.

SCROLL FOR NEXT