ರಾಜ್ಯ

ರಾಜ್ಯದ ಸಾಹಿತಿಗಳಿಗೆ ಜೀವ ಬೆದರಿಕೆ: ಸೂಕ್ತ ಕ್ರಮ ವಹಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

Srinivas Rao BV

ಬೆಂಗಳೂರು: ನಾಡಿನ ಅರಿವನ್ನು ವಿಸ್ತರಿಸುತ್ತಿರುವ ಹಲವಾರು ಲೇಖಕರು ಸಾಹಿತಿಗಳು ಹಾಗೂ ಹೋರಾಟಗಾರರಿಗೆ ಬೆದರಿಕೆ ಪತ್ರಗಳು ಬರುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.  ತಮ್ಮನ್ನು ಭೇಟಿ ಮಾಡಿದ ಹಿರಿಯ ಸಾಹಿತಿಗಳು, ಲೇಖಕರು ಮತ್ತು ಹೋರಾಟಗಾರರ ನಿಯೋಗಕ್ಕೆ ಈ ಭರವಸೆ ನೀಡಿದರು. 

ಹಿರಿಯ ಸಾಹಿತಿ ಡಾ.ಕೆ  ಮರುಳಸಿದ್ದಪ್ಪ ಅವರು ಮಾತನಾಡಿ ಹಲವಾರು ಸಾಹಿತಿಗಳಿಗೆ ಕಳೆದ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ನಿರಂತರವಾಗಿ ಜೀವ ಬೆದರಿಕೆ ಪತ್ರಗಳು ಬರುತ್ತಿವೆ. ಸಾಹಿತಿಗಳು . ಆತಂಕ, ಮುಜುಗರದಿಂದ   ಬದುಕುವ ಪರಿಸ್ಥಿತಿ ಉಂಟಾಗಿದೆ ಎಂದು ಹಲವು ಪ್ರಕರಣಗಳನ್ನು ಉದಾಹರಿಸಿದರು. 

ಕುಂ.ವೀರಭದ್ರಪ್ಪ, ಡಾ:ವಸುಂಧರಾ ಭೂಪತಿ, ಬಂಜಗೆರೆ ಜಯಪ್ರಕಾಶ್, ಅವರುಗಳಿಗೆ ಅತಿ ಹೆಚ್ಚು ಬೆದರಿಕೆಗಳು ಬಂದಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದ, ವಾತಾವರಣ ಸೃಷ್ಟಿಯಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಅವರಿಗೆ ಒದಗಿದ ಗತಿ ಒದಗಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಬೆದರಿಕೆ ಪತ್ರಗಳ ಬಗ್ಗೆ ಒಂದು ತಂಡ ರಚಿಸಿದ್ದು, ಇನ್ನಷ್ಟು ಪರಿಣಾಮಕಾರಿ ಯಾಗಿರುವ, ವೃತ್ತಿಪರವಾಗಿರುವ ಖಡಕ್ ಅಧಿಕಾರಿಗಳ ಪೊಲೀಸ್ ತಂಡವನ್ನು ರಚಿಸಬೇಕು ಎಂದರು.
 
ಸಾರ್ವಜನಿಕ ಪ್ರತಿಭಟನೆಗಳನ್ನು ಸ್ವಾತಂತ್ರ್ಯ ಉದ್ಯಾನವನಕ್ಕೆ ಮಾತ್ರ ಸೀಮಿತಗೊಳಿಸಿದ್ದು, ಇತರೆಡೆ ಪ್ರತಿಭಟನೆ ಮಾಡಲು ಇರುವ ನಿಷೇಧವನ್ನು ತೆಗೆಯಬೇಕೆಂದು ಮನವಿ ಮಾಡಿದರು. ಈವರೆಗೆ ಸುಮಾರು 15 ಪತ್ರಗಳು ಬಂದಿವೆ. ಈ ಸರ್ಕಾರ ಬಂದ ನಂತರ ಮೂರು ಪತ್ರಗಳು ಬಂದಿವೆ. ಒಂದೇ ರೀತಿಯ ಒಕ್ಕಣೆ ಇರುವ ಪತ್ರಗಳು ಬಂದಿವೆ ಎಂದು ಸಾಹಿತಿ ಡಾ: ವಸುಂಧರಾ ಭೂಪತಿ  ತಿಳಿಸಿದರು. 

ರಾಜ್ಯ ಶಿಕ್ಷಣ ನೀತಿ
ರಾಜ್ಯಕ್ಕೆ ಸೂಕ್ತವಾದ ಶಿಕ್ಷಣ ವ್ಯವಸ್ಥೆ ಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿದೆ. ರಾಜ್ಯ ಶಿಕ್ಷಣ ನೀತಿಯನ್ನು  ರೂಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಖಾಸಗಿ ವಲಯದಲ್ಲಿ ಹೆಚ್ವಿನ ಉದ್ಯೋಗಾವಕಾಶ ಗಳಿರುವುದರಿಂದ ಹೆಚ್ಚಿನವರು ಆಂಗ್ಲ ಮಾಧ್ಯಮಕ್ಕೆ ಮೊರೆ ಹೋಗುತ್ತಾರೆ. ಇದಕ್ಕೆ ಒಂದು ಮಧ್ಯಮ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಮರುಳಸಿದ್ದಪ್ಪ ತಿಳಿಸಿದರು.  

ಸೌಜನ್ಯ ಪ್ರಕರಣ
  
ಸೌಜನ್ಯ ಪ್ರಕರಣವನ್ನು ಮರುತನಿಖೆಗೆ ಒಳಪಡಿಸಬೇಕೆಂದು ಸಾಹಿತಿಗಳು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯ ಮಂತ್ರಿಗಳು ಮರುತನಿಖೆ ಕೈಗೊಳ್ಳುವಂತೆ ಭಾರತ ಸರ್ಕಾರಕ್ಕೆ  ಈ ಬಗ್ಗೆ ಪತ್ರ ಬರೆಯಬಹುದು. ಅಡ್ವೊಕೇಟ್ ಜನರಲ್ ಅವರೊಂದಿಗೆ ಮಾತನಾಡಿದ್ದು, ಅವರ ಪೋಷಕರು ಮೇಲ್ಮನವಿ ಸಲ್ಲಿಸಬೇಕು ಎಂದು ವಿವರಿಸಿದರು.

ಹಿರಿಯ ಸಾಹಿತಿಗಳಾದ ಡಾ: ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ, ಬಂಜಗೆರೆ ಜಯಪ್ರಕಾಶ್, ಡಾ: ವಸುಂಧರಾ ಭೂಪತಿ, ಡಾ: ವಿಜಯಮ್ಮ, ದಿನೇಶ್ ಅಮೀನ್ ಮಟ್ಟು, ರುದ್ರಪ್ಪ ಹನಗವಾಡಿ, ಎಲ್.ಎನ್.ಮುಕುಂದರಾಜ್ ಸೇರಿ ಹಲವು ಲೇಖಕರು ಉಪಸ್ಥಿತರಿದ್ದರು.

SCROLL FOR NEXT