ರಾಜ್ಯ

ದೊಡ್ಡಬಳ್ಳಾಪುರ: ವರಮಹಾಲಕ್ಷ್ಮೀ ಹಬ್ಬಕ್ಕೆಂದು ತಾವರೆ ಹೂವು ಕೀಳಲು ಹೋಗಿ ತಂದೆ-ಮಗ ದುರಂತ ಸಾವು

Manjula VN

ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬಕ್ಕೆ ತಾವರೆ ಹೂ ಕೀಳಲೆಂದು ಕೆರೆಗೆ ಇಳಿದ ತಂದೆ ಮಗ ಇಬ್ಬರೂ ಮುಳುಗಿ ಸಾವಿಗೀಡಾದ ಘಟನೆ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ಭೂಚನಹಳ್ಳಿ ಗ್ರಾಮದ ಕೆರೆಯಲ್ಲಿ ನಡೆದಿದೆ.

ಪುಟ್ಟರಾಜು (42) ಹಾಗೂ ಮಗ ಕೇಶವ (14) ಮೃತಪಟ್ಟ ದುರ್ದೈವಿಗಳು. ಮೃತರು ದೊಡ್ಡಬಳ್ಳಾಪುರ ಶಾಂತಿನಗರದ ನಿವಾಸಿಗಳೆಂದು ತಿಳಿದುಬಂದಿದೆ.

ವರಮಹಾಲಕ್ಷ್ಮೀ  ಹಬ್ಬಕ್ಕಾಗಿ ಮಾರಾಟ ಮಾಡಲು ಭೂಚನಹಳ್ಳಿ ಬಳಿಯ ಕೆರೆಗೆ ತಾವರೆ ಹೂ ಕೀಳಲು ತಂದೆ ಮಗ ಹೋಗಿದ್ದರು. ಕೆರೆಯ ದಡದಲ್ಲಿ ಮೊಬೈಲ್, ಚಪ್ಪಲಿ ಬಿಟ್ಟು ತಾವರೆ ಹೂ ಕೀಳಲು ಮುಂದಾದ ವೇಳೆ ಅವಘಡ ಸಂಭವಿಸಿದೆ.

ಆಳ ತಿಳಿಯದೆ ಇದ್ದುದ್ದರಿಂದ ಕೆಸರಿನಲ್ಲಿ ಸುಲುಕಿ ಇಬ್ಬರೂ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆ.

ಮತ್ತೊಬ್ಬ ತಾವರೆ ಹೂ ಮಾರಾಟಗಾರ ಕೆರೆಯ ಬಳಿ ಹೋದಾಗ ಪಾದರಕ್ಷೆಗಳು, ಪರ್ಸ್ ಮತ್ತು ಮೊಬೈಲ್‌ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. 

ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರೂ ಸಂಜೆಯಾಗುತ್ತಿದ್ದರಿಂದ ಮೃತದೇಹಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಇಂದು ಬೆಳಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿ ಶವಗಳನ್ನು ಹೊರತೆಗೆದಿದ್ದಾರೆ. ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT