ರಾಜ್ಯ

ಅಕ್ಟೋಬರ್ 5 ರಿಂದ ಬೆಳಗಾವಿಯಿಂದ ದೆಹಲಿಗೆ ಇಂಡಿಗೋ ವಿಮಾನ ಸೇವೆ ಆರಂಭ

Ramyashree GN

ಬೆಳಗಾವಿ: ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದರೂ ಕೂಡ ಹಲವಾರು ಕಾರಣಗಳಿಂದಾಗಿ, ಕಳೆದ ಕೆಲವು ವರ್ಷಗಳಿಂದ ಬೆಳಗಾವಿ ವಿಮಾನ ನಿಲ್ದಾಣದಿಂದ ಹಲವಾರು ಪ್ರಮುಖ ಸ್ಥಳಗಳಿಗೆ ತೆರಳುವ ವಿಮಾನ ಸೇವೆಗಳು ಸ್ಥಗಿತಗೊಂಡಿವೆ. 

ಆದರೆ, ಕೆಲವು ತಿಂಗಳ ಹಿಂದೆ ಬೆಳಗಾವಿ ಮತ್ತು ದೆಹಲಿ ನಡುವಿನ ವಿಮಾನಗಳನ್ನು ಸ್ಥಗಿತಗೊಳಿಸಿದ್ದರಿಂದ ರಾಷ್ಟ್ರ ರಾಜಧಾನಿಗೆ ತೆರಳುವ ಹೆಚ್ಚಿನ ಸಂಖ್ಯೆಯ ವಿಮಾನ ಪ್ರಯಾಣಿಕರು ತೊಂದರೆಗೆ ಒಳಗಾಗಿದ್ದರು. ಇದೀಗ ಬೆಳಗಾವಿ ಮತ್ತು ದೆಹಲಿ ನಡುವಿನ ದೈನಂದಿನ ವಿಮಾನಗಳು ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿವೆ.

ಮೂಲಗಳ ಪ್ರಕಾರ, ಬೆಳಗಾವಿ-ದೆಹಲಿ ವಿಮಾನಗಳ ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಇಂಡಿಗೋ ಏರ್‌ಲೈನ್ಸ್ ಎರಡು ನಗರಗಳ ನಡುವೆ ವಿಮಾನ ಸೇವೆಗಳನ್ನು ಆರಂಭಿಸಲಿದೆ. ದೆಹಲಿ-ಬೆಳಗಾವಿ ವಿಮಾನವು ದೆಹಲಿಯಿಂದ ಪ್ರತಿದಿನ ಮಧ್ಯಾಹ್ನ 3.45ಕ್ಕೆ ಟೇಕ್ ಆಫ್ ಆಗಲಿದ್ದು, 6.05ಕ್ಕೆ ಬೆಳಗಾವಿ ತಲುಪಲಿದೆ. ಬೆಳಗಾವಿ-ದೆಹಲಿ ವಿಮಾನವು ಬೆಳಗಾವಿಯಿಂದ ಸಂಜೆ 6.35ಕ್ಕೆ ಟೇಕಾಫ್ ಆಗಿ ದೆಹಲಿಯನ್ನು ರಾತ್ರಿ 9 ಗಂಟೆಗೆ ತಲುಪಲಿದೆ.

ಹಲವಾರು ತಿಂಗಳುಗಳ ಹಿಂದೆ ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ವಿಮಾನಯಾನ ಸಂಸ್ಥೆಗಳು ಹಠಾತ್ತನೆ ತಮ್ಮ ಸೇವೆಗಳನ್ನು ಸ್ಥಗಿತಗೊಳಿಸಿದ್ದವು. ಹೆಚ್ಚಿನ ಸಂಖ್ಯೆಯ ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ರಕ್ಷಣಾ ಅಧಿಕಾರಿಗಳು ಮತ್ತು ರಾಜಕಾರಣಿಗಳು ಬೆಳಗಾವಿ-ದೆಹಲಿ ನಡುವಿನ ಹಿಂದಿನ ಸ್ಪೈಸ್‌ಜೆಟ್ ವಿಮಾನವನ್ನು ಅವಲಂಬಿಸಿದ್ದರು.

ಅಂದಿನಿಂದ, ಈ ಪ್ರದೇಶದ ಪ್ರಯಾಣಿಕರು ಗೋವಾ ಅಥವಾ ಬೆಂಗಳೂರಿನಂತಹ ವಿಮಾನ ನಿಲ್ದಾಣಗಳಿಂದ ದೆಹಲಿ ಸಂಪರ್ಕಿಸುವ ವಿಮಾನಗಳನ್ನು ಹಿಡಿಯುವಂತಾಗಿತ್ತು. ಬೆಳಗಾವಿ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಗಳಿಂದ ಸೇವೆ ಒದಗಿಸುತ್ತಿದ್ದ ಹೆಚ್ಚಿನ ವಿಮಾನಗಳು ಉತ್ತಮ ಪ್ರತಿಕ್ರಿಯೆ ಪಡೆದಿವೆ. ವಿಶೇಷವಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಹಲವಾರು ಪ್ರಮುಖ ನಗರಗಳಿಗೆ ವಿಮಾನಗಳನ್ನು ಪರಿಚಯಿಸಿದ ನಂತರ ವ್ಯಾಪಕ ಪ್ರತಿಕ್ರಿಯೆ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT