ರಾಜ್ಯ

ಅಪಘಾತಗಳ ಹಾಟ್‌ಸ್ಪಾಟ್‌ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 24 ಸ್ಕೈವಾಕ್ ನಿರ್ಮಾಣ

Shilpa D

ಬೆಂಗಳೂರು: ಅಪಘಾತಗಳ ಹಾಟ್‌ಸ್ಪಾಟ್‌ ಆಗಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಜನರು ರಸ್ತೆ ದಾಟಲು ಅನುವಾಗುವಂತೆ ಸ್ಕೈವಾಕ್‌ಗಳು ನಿರ್ಮಾಣಗೊಳ್ಳಲಿವೆ. 118 ಕಿ.ಮೀ ಉದ್ದದ ಎಕ್ಸ್‌ಪ್ರೆಸ್‌ ವೇಯಲ್ಲಿನ ಒಟ್ಟು 24 ಕಡೆ ಈ ಸ್ಕೈವಾಕ್‌ ನಿರ್ಮಾಣವಾಗಲಿದೆ.

ಆಕ್ಸೆಸ್‌ ಕಂಟ್ರೋಲ್‌ ಹೈವೇ ದಾಟಲು ಯಾವುದೇ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡದ ಕಾರಣ ಸಾರ್ವಜನಿಕರು ಕೆಲವೆಡೆ ರಸ್ತೆ ಮಧ್ಯೆ ನಡೆದು ಹೋಗುತ್ತಿದ್ದರು. ಇದರಿಂದ ಅಪಘಾತ ಹೆಚ್ಚುತ್ತಿದೆ ಎಂದು ರಸ್ತೆ ಸುರಕ್ಷತೆ ಬಗ್ಗೆ ಅಧ್ಯಯನ ನಡೆಸಿದ ಪೊಲೀಸ್‌ ಇಲಾಖೆ ವರದಿ ನೀಡಿತ್ತು. ಈ ಸಂಬಂಧ ಪದೇ ಪದೇ ದೂರುಗಳು ಬಂದ ಹಿನ್ನೆಲೆಯಲ್ಲಿ ಹೆದ್ದಾರಿಯುದ್ದಕ್ಕೂ 24 ಸ್ಕೈವಾಕ್‌ಗಳನ್ನು ನಿರ್ಮಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜಿಸಿದೆ.

ಜೂನ್‌ನಲ್ಲಿ ಹೆದ್ದಾರಿಯನ್ನು ಪರಿಶೀಲಿಸಿದ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ಅವರು ಸ್ಕೈವಾಕ್‌ಗಳ ಅನುಪಸ್ಥಿತಿಯಲ್ಲಿ, ಪಾದಚಾರಿಗಳು ತಮ್ಮ ಪ್ರಾಣವನ್ನು ಅಪಾಯಕ್ಕೆ ಒಡ್ಡಿದಂತಾಗುತ್ತದೆ. ಅತಿವೇಗದಲ್ಲಿ ಚಲಿಸುವ ವಾಹನಗಳಿಗೆ ಅಪಾಯವನ್ನುಂಟುಮಾಡುತ್ತಿದ್ದಾರೆ. ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸ್ಕೈವಾಕ್ ನಿರ್ಮಿಸಲು ಒತ್ತಾಯಿಸಿದರು.

ಸುಮಾರು ಒಂದು ವರ್ಷದಲ್ಲಿ ಎಲ್ಲಾ ಇಪ್ಪತ್ನಾಲ್ಕು ಸ್ಕೈವಾಕ್‌ಗಳನ್ನು ಹೆದ್ದಾರಿಯುದ್ದಕ್ಕೂ ಸ್ಥಾಪಿಸಲಾಗುವುದು ಎಂದು NHAI ಮೂಲಗಳು ಬಹಿರಂಗಪಡಿಸಿವೆ. ಬೆಂಗಳೂರು ಹೊರವಲಯದಲ್ಲಿರುವ ಪಂಚಮುಖಿ ಗಣೇಶ ದೇವಸ್ಥಾನದ ನಂತರ ಪ್ರಾರಂಭವಾಗುವ ಮೇಲ್ಸೇತುವೆಯಿಂದ ಎಲ್ಲಾ ವಾಹನಗಳು ಇಳಿಯುವ ಕಣಿಮಿಣಿಕೆಯಲ್ಲಿ ಮೊದಲ ಸ್ಕೈವಾಕ್  ಸ್ಥಾಪಿಸಿದರೆ, ಕೊನೆಯ ಸ್ಕೈವಾಕ್ ಸಿದ್ದಲಿಂಗಪುರದಲ್ಲಿ ಬರಲಿದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಕೆಲವು ಗ್ರಾಮಗಳಲ್ಲಿ ಒಂದಕ್ಕಿಂತ ಹೆಚ್ಚು ಸ್ಕೈವಾಕ್‌ಗಳಿದ್ದರೆ, ಕೆಲವು ಗ್ರಾಮಗಳಲ್ಲಿ ಒಂದು ಸ್ಕೈವಾಕ್ ಇರುತ್ತದೆ.

ಕಣಿಮಿಣಿಕೆ, ಮಂಚನಾಯಕನಹಳ್ಳಿ, ಕಲ್ಲುಗೊಪ್ಪಹಳ್ಳಿ, ಹುಲ್ತಾರ್ ಹೊಸದೊಡ್ಡಿ, ಮಾದಾಪುರ, ದಬಾನಗುಂದ, ರುದ್ರಾಕ್ಷಿಪುರ, ಅಗರಲಿಂಗನದೊಡ್ಡಿ, ಮೊಬ್ಬಲಗೆರೆ, ಗೆಜ್ಜಲಗೆರೆ ಕೈಗಾರಿಕಾ ಪ್ರದೇಶ, ಗೆಜ್ಜಲಗೆರೆ, ಬಿ. ಗೌಡಗೆರೆ, ಸಡಲಗೆರೆ, ಬೂದನೂರು, ಗೌಡನಳ್ಳಿ,  ಗಂಗೂರು, ಗೌಡಹಳ್ಳಿ, ಬ್ರಹ್ಮಪುರ , ಕಾಳೇನಹಳ್ಳಿ, ಸಿದ್ದಾಪುರ, ಕಳಸ್ತವಾಡಿ ಮತ್ತು ಸಿದ್ದಲಿಂಗಪುರ ಸೇರಿದಂತೆ ಹಲವೆಡೆ ಸ್ಕೈವಾಕ್ ಗಳು ನಿರ್ಮಾಣವಾಗಲಿವೆ.

SCROLL FOR NEXT