ರಾಜ್ಯ

ಮೇಲ್ಸೇತುವೆಯಲ್ಲಿ ಉರುಳಿಬಿದ್ದ ಬಿಎಂಟಿಸಿ ವೊಲ್ವೊ ಬಸ್: ಚಾಲಕನ ತಲೆಗೆ ಗಂಭೀರ ಗಾಯ

Manjula VN

ಬೆಂಗಳೂರು: ಪ್ಯಾಲೇಸ್ ಗುಟ್ಟಹಳ್ಳಿ ಮೇಲ್ಸೇತುವೆ ಬಳಿಯ ರಸ್ತೆ ವಿಭಜಕಕ್ಕೆ ಬಿಎಂಟಿಸಿ ವೊಲ್ವೊ ಬಸ್‌ ಡಿಕ್ಕಿ ಹೊಡೆದು ಉರುಳಿಬಿದ್ದ ಪರಿಣಾಮ, ಚಾಲಕನ ತಲೆಗೆ ಗಂಭೀರ ಗಾಯವಾಗಿರುವ ಘಟನೆ ಮಂಗಳವಾರ ನಡೆದಿದೆ.

‘ಸೋಮವಾರ ರಾತ್ರಿ 12.15ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೀಡಾದ ಬಸ್ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಬಿಡಿಎ ಕಾಂಪ್ಲೆಕ್ಸ್ ಕಡೆಗೆ ತೆರಳುತ್ತಿತ್ತು. ಬಿಡಿಎ ಕೇಂದ್ರ ಕಚೇರಿ ಬಳಿಯ ಪ್ಯಾಲೇಸ್ ಗುಟ್ಟಹಳ್ಳಿ ಮೇಲ್ಸೇತುವೆಗೆ ಬಸ್ ಪ್ರವೇಶಿಸಿದ್ದು, ಈ ವೇಳೆ ಚಾಲಕನಿಗೆ ತಲೆ ಸುತ್ತು ಬಂದಿದೆ. ಪರಿಣಾಮ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ.

ಘಟನೆಯಲ್ಲಿ ಚಾಲಕನ ತಲೆಗೆ ಗಂಭೀರ ಗಾಯಗಳಾಗಿದ್ದು, ಇಬ್ಬರು ಮಹಿಳಾ ಪ್ರಯಾಣಿಕರ ಬೆರಳುಗಳಿಗೆ ಗಾಯವಾಗಿದೆ. ಉಳಿದಂತೆ ಬಸ್ ನಲ್ಲಿದ್ದ 10 ಮಂದಿ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ.

ಗಾಯಗೊಂಡಿರುವ ಚಾಲಕ ಹಾಗೂ ಮಹಿಳಾ ಪ್ರಯಾಣಿಕರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೆಎಸ್‌ಆರ್‌ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಫೆಡರೇಶನ್‌ನ ಸದಸ್ಯರು, ಸಮಯಕ್ಕೆ ಸರಿಯಾಗಿ ಬಸ್ ಗಳನ್ನು ಚಾಲನೆ ಮಾಡಲು ಚಾಲಕರು ಒತ್ತಡಕ್ಕೆ ಸಿಲುಕಿರುತ್ತಾರೆ. ವೇಳಾಪಟ್ಟಿ ಪರಿಷ್ಕರಿಸುವಂತೆ ಬೇಡಿಕೆಗಳನ್ನು ಇಡಲಾಗಿದೆ. ಆದರೆ, ನಮ್ಮ ಬೇಡಿಕೆಗಳಿಗ ಬಿಎಂಟಿಸಿ ಆಡಳಿತ ಮಂಡಳಿ ಕಿವಿಗೊಡುತ್ತಿಲ್ಲ. ಇದರಿಂದ ಚಾಲಕರು ತಮ್ಮ ಪ್ರಾಣಕ್ಕೆ ಅಪಾಯವನ್ನು ತಂದೊಡ್ಡುವ ಒತ್ತಡಕ್ಕೆ ಒಳಗಾಗುತ್ತಿದ್ದಾರೆಂದು ಹೇಳಿದ್ದಾರೆ. ಈ ನಡುವೆ ಘಟನೆ ಸಂಬಂಧ ಬಿಎಂಟಿಸಿ ತನಿಖೆ ಆರಂಭಿಸಿದೆ.

SCROLL FOR NEXT