ರಾಜ್ಯ

ಆಲೂರು: ಅರವಳಿಕೆ ತಜ್ಞನ ಮೇಲೆ ಕಾಡಾನೆ ದಾಳಿ; ಗಂಭೀರ ಗಾಯ!

Srinivas Rao BV

ಹಾಸನ: ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹುಲಿಯೂರು ಗ್ರಾಮದಲ್ಲಿ ಕಾಡಾನೆಯೊಂದು ವೈದ್ಯಕೀಯ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದು, ಅರವಳಿಕೆ ತಜ್ಞ ತೀವ್ರವಾಗಿ ಗಾಯಗೊಂಡಿದ್ದಾರೆ. 

ಗಾಯಗೊಂಡಿರುವ ಅರವಳಿಕೆ ತಜ್ಞ ವೆಂಕಟೇಶ್ ಶಾರ್ಪ್ ಶೂಟರ್ ಆಗಿದ್ದು, ಚಿಕಿತ್ಸೆ ನೀಡಲೆಂದು ಹೋದಾಗ, ಆನೆಗೆ ಅರವಳಿಕೆ ನೀಡುವ ಪ್ರಕ್ರಿಯೆ ವೇಳೆ ಈ ಅವಘಡ ಸಂಭವಿಸಿದೆ. 

40 ವರ್ಷದ ಕಾಡಾನೆ ಭೀಮ ವೈದ್ಯಕೀಯ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದು, ಈ ಆನೆ ಮತ್ತೊಂದು ಆನೆಯೊಂದಿಗೆ ಕಾಳಗ ನಡೆಸಿದ್ದ ಹಿನ್ನೆಲೆಯಲ್ಲಿ ಬೆನ್ನಿನ ಮೇಲೆ ಗಾಯಗಳಾಗಿತ್ತು.

ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಗಾಯಗೊಂಡಿದ್ದ ಆನೆಗೆ ಚಿಕಿತ್ಸೆ ಕೊಡಿಸುವುದಕ್ಕಾಗಿ ಅರವಳಿಕೆ ನೀಡಲು ಹಾಸನ ಅರಣ್ಯ ವಿಭಾಗ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಅನುಮತಿ ಪಡೆದಿತ್ತು. 

ತೀವ್ರವಾಗಿ ಗಾಯಗೊಂಡಿರುವ ವೆಂಕಟೇಶ್ ಅವರ ಸ್ಥಿತಿ ಚಿಂತಾಜನಕವಾಗಿದ್ದು ಹೆಚ್ಐಎಂಎಸ್ ನ ಐಸಿಯುಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆಯೇ ಹಿರಿಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಪರಿಸ್ಥಿತಿ ನಿಯಂತ್ರಿಸಿದ್ದಾರೆ.

50ಕ್ಕೂ ಹೆಚ್ಚು ಕಾಡಾನೆಗಳಿಗೆ ಅರವಳಿಕೆ ನೀಡುವ ಮೂಲಕ ವೆಂಕಟೇಶ್ ಅವರು ತಮ್ಮ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದ್ದರು. ದಶಕಗಳಿಂದ ದಿನನಿತ್ಯ ವೇತನ ಪಡೆಯುವ ಆಧಾರದಲ್ಲಿ ವೆಂಕಟೇಶ್ ಕಾರ್ಯನಿರ್ವಹಿಸುತ್ತಿದ್ದಾರೆ. ಅರಣ್ಯ ಇಲಾಖೆ ಅವರ ಉದ್ಯೋಗವನ್ನು ಇನ್ನಷ್ಟೇ ಖಾಯಂಗೊಳಿಸಬೇಕಿದೆ.

SCROLL FOR NEXT