ರಾಜ್ಯ

ಅಬಕಾರಿ ಕಾಯಿದೆಗೆ ತಿದ್ದುಪಡಿ; ಪರವಾನಗಿಯಲ್ಲೂ ಮೀಸಲಾತಿ ನೀಡುವ ಬಗ್ಗೆ ಪರಿಶೀಲನೆ: ಸಚಿವ ತಿಮ್ಮಾಪುರ

Lingaraj Badiger

ಬೆಳಗಾವಿ: ಹೋಟೆಲ್‌ ಮತ್ತು ವಸತಿ ಗೃಹಗಳಿಗೆ(ಬೋರ್ಡಿಂಗ್ ಆಂಡ್ ಲಾಡ್ಜಿಂಗ್) ಮದ್ಯದ ಪರವಾನಗಿ ನೀಡುವ ನಿಯಮಗಳಿಗೆ ತಿದ್ದುಪಡಿ ತರಲಾಗುವುದು ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಮಂಗಳವಾರ ಹೇಳಿದ್ದಾರೆ.

ಇಂದು ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಎಸ್.ಎನ್. ನಾರಾಯಣಸ್ವಾಮಿ ಪ್ರಸ್ತಾಪಿಸಿದ ವಿಷಯಕ್ಕೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಅವರು, ಅಬಕಾರಿ ಕಾಯಿದೆಗೆ ತಿದ್ದಪಡಿ ತರಲಾಗುವುದು ಮತ್ತು ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ಸಂದರ್ಭದಲ್ಲಿ ಮೀಸಲಾತಿ ನೀಡುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದರು.

ಕೋಲಾರ ಜಿಲ್ಲೆಯಲ್ಲಿ ಸಿಎಲ್-7 ಪರವಾನಗಿ ನೀಡುವಲ್ಲಿ ಅಕ್ರಮ ನಡೆದಿದೆ. ನಿಮಯಗಳನ್ನು ಗಾಳಿಗೆ ತೂರಿ ಪರವಾನಗಿ ನೀಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಒತ್ತಾಯಿಸಿದರು.

ಅಬಕಾರಿ ಸೂಪರಿಂಟೆಂಡೆಂಟ್ ರಂಗಪ್ಪ ಅವರು ಸಿಎಲ್-7 ಪರವಾನಗಿಯನ್ನು ಅಕ್ರಮವಾಗಿ ನೀಡಿದ್ದಾರೆ ಎಂದು ಆರೋಪಿಸಿದರು ಮತ್ತು ಅವರು ಪರವಾನಗಿ ನೀಡುವ ಪ್ರತಿಯೊಂದು ವ್ಯವಹಾರದಲ್ಲಿ ಸಹ ಪಾಲುದಾರರಾಗಿದ್ದಾರೆ ಎಂದು ಆರೋಪಿಸಿದರು.

ಚರ್ಚೆಯ ಸಂದರ್ಭದಲ್ಲಿ, ಕೆಲವು ಕಾಂಗ್ರೆಸ್ ಶಾಸಕರು, ಬಿಜೆಪಿ ಅಧಿಕಾರದಲ್ಲಿದ್ದಾಗ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದರು. ಆರೋಪ ತಳ್ಳಿಹಾಕಿದ ಆಗಿನ ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು, ತಾಕತ್ತು ಇದ್ದರೆ ತನಿಖೆ ಮಾಡುವಂತೆ ಸರ್ಕಾರಕ್ಕೆ ಸವಾಲು ಹಾಕಿದರು.

ಮಧ್ಯಪ್ರವೇಶಿಸಿದ ಪ್ರತಿಪಕ್ಷದ ನಾಯಕ ಆರ್.ಅಶೋಕ್, ನಮ್ಮ ಸರ್ಕಾರ ಇರಲಿ ಅಥವಾ ಇನ್ನಾವುದೇ ಸರ್ಕಾರ ಇರಲಿ. ಆ ಬಗ್ಗೆ ತನಿಖೆಯಾಗಲಿ, ಅಂತಹ ಪರವಾನಗಿಗಳನ್ನು ರದ್ದುಗೊಳಿಸಲಿ ಎಂದರು. 
ರಂಗಪ್ಪ ಅವರ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ವರದಿ ಪಡೆದು ಕ್ರಮ ಕೈಗೊಳ್ಳುವುದಾಗಿ ಅಬಕಾರಿ  ಸಚಿವರು ಸದನಕ್ಕೆ ಭರವಸೆ ನೀಡಿದರು.

ಇದೇ ವೇಳೆ ಮಳವಳ್ಳಿ ಕಾಂಗ್ರೆಸ್ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಅಬಕಾರಿ ಲೈಸೆನ್ಸ್‌ನಲ್ಲಿ ಮೀಸಲಾತಿಯನ್ನು ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸಿದರು. ಇದಕ್ಕೆ ಕಾನೂನು ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಸಚಿವರು ಹೇಳಿದರು.

ಆದರೆ, ಮೀಸಲಾತಿ ಹೆಸರಿನಲ್ಲಿ ಮದ್ಯದಂಗಡಿಗಳ ಸಂಖ್ಯೆ ಹೆಚ್ಚಿಸಬಾರದು ಎಂದು ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ಮತ್ತು ಅಶೋಕ ಹೇಳಿದರು.

SCROLL FOR NEXT