ರಾಜ್ಯ

ವಿದೇಶಗಳಿಗೆ ನೆರವು ಘೋಷಿಸುವ ಪ್ರಧಾನಿ ಮೋದಿಗೆ ಕರ್ನಾಟಕ ಬರ ಪರಿಹಾರ ವಿಚಾರದಲ್ಲಿ ಯಾಕೆ ಈ ಅಸಡ್ಡೆ: ಸಿಎಂ ಸಿದ್ದರಾಮಯ್ಯ

Vishwanath S

ಬೆಂಗಳೂರು: ಕರ್ನಾಟಕ ತೀವ್ರ ಬರದಿಂದ ತತ್ತರಿಸುತ್ತಿದ್ದು ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರದ ಮುಂದೆ ಹಲವು ಬಾರಿ ಅಲವತ್ತುಕೊಂಡರೂ ರಾಜ್ಯದ ರೈತರ ಸಂಕಷ್ಟದ ವಿಚಾರದಲ್ಲಿ ಅಂತಾರಾಷ್ಟ್ರೀಯ ಸಮುದಾಯದ ನೆರವಿಗೆ ಧಾವಿಸುವ ರೀತಿಯ ಕಾಳಜಿಯನ್ನು ಏಕೆ ತೋರಿಸಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ. 

ಜ್ವಾಲಾಮುಖಿ ಸ್ಫೋಟದ ನಂತರ ಭಾರತ ಸರ್ಕಾರವು ಪಪುವಾ ನ್ಯೂಗಿನಿಯಾಕ್ಕೆ 1 ಮಿಲಿಯನ್ ಡಾಲರ್ ನೆರವು ಮತ್ತು ಕೀನ್ಯಾಕ್ಕೆ ಕೃಷಿಯನ್ನು ಮೇಲ್ದರ್ಜೆಗೆ ಏರಿಸಲು 250 ಮಿಲಿಯನ್ ಅಮೆರಿಕ ಡಾಲರ್ ನೆರವನ್ನು ಘೋಷಿಸಿದೆ ಎಂಬ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ ಸಿದ್ದರಾಮಯ್ಯ ಅವರು, ಕರ್ನಾಟಕದ ಬರ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೌನವಾಗಿರುವುದೇಕೆ, ಪ್ರತಿಕೂಲ ಪರಿಸ್ಥಿತಿಯಲ್ಲಿ ಎಲ್ಲಾ ರಾಜ್ಯಗಳು ಮತ್ತು ನಾಗರಿಕರನ್ನು ಸಮಾನವಾಗಿ ಯಾಕೆ ಪರಿಗಣಿಸುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. 

ಇತರ ದೇಶಗಳಿಗೆ ಪ್ರಧಾನಿ ಮೋದಿ ಅವರು ನೆರವಿನ ಹಸ್ತವನ್ನು ವಿಸ್ತರಿಸುವುದಕ್ಕೆ ನಮಗೆ ಯಾವುದೇ ವಿರೋಧವಿಲ್ಲ. ಭಾರತದ ರಾಜತಾಂತ್ರಿಕ ನೆರವು ಮತ್ತು ಮೃಧು ಶಕ್ತಿ ರಾಜತಾಂತ್ರಿಕತೆ. ಇದು ಸ್ವಾತಂತ್ರ್ಯ ಪೂರ್ವದಿಂದಲೂ ನಡೆದುಕೊಂಡು ಬರುತ್ತಿದೆ ಎಂದು ಮುಖ್ಯಮಂತ್ರಿಗಳು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆದರೆ ಬರಗಾಲದಿಂದ ಬೆಳೆ ನಷ್ಟ ಅನುಭವಿಸಿದ ನಮ್ಮ ರೈತರ ಬಗ್ಗೆ ಮೋದಿಯವರು ಅದೇ ಮಟ್ಟದ ಕಾಳಜಿಯನ್ನು ಏಕೆ ಪ್ರದರ್ಶಿಸುವುದಿಲ್ಲ? ಕನ್ನಡಿಗರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯಾಕೆ ಇಷ್ಟೊಂದು ಅಸಡ್ಡೆ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ರೈತರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಇನ್ನೂ ಪೂರ್ವಭಾವಿ ಸಭೆ ನಡೆಸಿಲ್ಲ. ಇದರ ಪರಿಣಾಮವಾಗಿ ರಾಜ್ಯದಿಂದ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಅರ್ಹ ರೈತರಿಗೆ ತಲಾ 2,000 ರೂ.ವರೆಗೆ ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದರು.

ರಾಜ್ಯದ ಮೂವರು ಸಚಿವರು ದೆಹಲಿಗೆ ತೆರಳಿದರೂ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಪರಿಹಾರಕ್ಕಾಗಿ 18,171 ಕೋಟಿ ರೂಪಾಯಿ ಆರ್ಥಿಕ ನೆರವು ನೀಡುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಪ್ರಸ್ತುತ ಕೇಂದ್ರವು ಕರ್ನಾಟಕದ ಪಾಲಿನ ತೆರಿಗೆ ಹಣವನ್ನು ಬಿಡುಗಡೆ ಮಾಡಿದರೂ ಸಾಕು, ಅದು ರಾಜ್ಯದ ರೈತರ ಸಂಕಷ್ಟಗಳನ್ನು ನಿವಾರಿಸಲು ಸಹಾಯವಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

ಬರದಿಂದಾಗಿ ರಾಜ್ಯದ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಹೀಗಾಗಿ ರಾಜ್ಯ ಸರ್ಕಾರವು 4,663 ಕೋಟಿ ರೂಪಾಯಿ ಬೆಳೆ ನಷ್ಟ ಪರಿಹಾರವನ್ನಾಗಿ ನೀಡಿ ಎಂದು ಕೇಂದ್ರಕ್ಕೆ ಕೇಳಿದೆ. ಈ ಬಗ್ಗೆ ಕೇಂದ್ರ ಕೃಷಿ ಮತ್ತು ವಸತಿ ಸಚಿವರನ್ನು ನೇರವಾಗಿ ಭೇಟಿ ಮಾಡಲು ಅವಕಾಶ ನೀಡುವಂತೆ ಪತ್ರ ಬರೆದಿದ್ದೆ ಆದರೆ ಅವರು ನಮಗೆ ಇನ್ನೂ ಕಾಲಾವಕಾಶ ನೀಡಿಲ್ಲ ಎಂದರು.

ಈ ವರ್ಷ ಸರಿಯಾಗಿ ಮಳೆಯಾಗದ ಕಾರಣ ಕರ್ನಾಟಕದ ಬಹುತೇಕ ಭಾಗಗಳು ಬರಗಾಲಕ್ಕೆ ತುತ್ತಾಗಿವೆ. ರಾಜ್ಯದ 136 ತಾಲ್ಲೂಕುಗಳ ಪೈಕಿ 123 ತಾಲ್ಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ.

SCROLL FOR NEXT