ಪತ್ರಿಕಾಗೋಷ್ಠಿಯಲ್ಲಿ ಮಾನತಾಡಿದ ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು 
ರಾಜ್ಯ

ಪ್ರಧಾನಿ ಮೋದಿಯವರ ಹಠದಿಂದಾಗಿ, ಬಿಜೆಪಿಯೇತರ ರಾಜ್ಯಗಳಿಗೆ ಅನ್ಯಾಯ: ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು

ಬಿಜೆಪಿಯ 25 ಸಂಸದರಿದ್ದರೂ ರಾಜ್ಯಕ್ಕೆ ಬರಬೇಕಿರುವ ಜಿಎಸ್‌ಟಿ ಪಾಲನ್ನು ಕೇಳುತ್ತಿಲ್ಲ. ಬರ ಪರಿಹಾರಕ್ಕೆ ಒತ್ತಾಯಿಸುತ್ತಿಲ್ಲ. ಬಿಜೆಪಿ ಸರ್ಕಾರವಿರುವ ರಾಜ್ಯಗಳಿಗೆ ಹಣ ನೀಡಲಾಗುತ್ತಿದೆ. ಬಿಜೆಪಿಯೇತರ ರಾಜ್ಯಗಳನ್ನು ಹತ್ತಿಕ್ಕುವ ಪ್ರಯತ್ನವಾಗುತ್ತಿದೆ. ಮೋದಿಯವರ ಹಠದಿಂದಾಗಿ ಬಿಜೆಪಿಯೇತರ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು

ವಿಜಯನಗರ: ರಾಜ್ಯದಲ್ಲಿ ಬಿಜೆಪಿಯ 25 ಸಂಸದರಿದ್ದರೂ ರಾಜ್ಯಕ್ಕೆ ಬರಬೇಕಿರುವ ಜಿಎಸ್‌ಟಿ ಪಾಲನ್ನು ಕೇಳುತ್ತಿಲ್ಲ. ಬರ ಪರಿಹಾರಕ್ಕೆ ಒತ್ತಾಯ ಮಾಡುತ್ತಿಲ್ಲ. ಬಿಜೆಪಿ ಸರ್ಕಾರವಿರುವ ರಾಜ್ಯಗಳಿಗೆ ಹಣ ನೀಡಲಾಗುತ್ತಿದೆ. ಬಿಜೆಪಿಯೇತರ ರಾಜ್ಯಗಳನ್ನು ಹತ್ತಿಕ್ಕುವ ಪ್ರಯತ್ನವಾಗುತ್ತಿದೆ. ಮೋದಿಯವರ ಹಠದಿಂದಾಗಿ ಬಿಜೆಪಿಯೇತರ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಸದನ ಆರಂಭವಾಗಿ ಮೂರು ದಿನ ಕಳೆದರೂ ಹಿಂದುಳಿದ ಭಾಗಗಳ ಕುರಿತು ಚರ್ಚೆಯಾಗಿಲ್ಲ. ಶೇ 40ರಷ್ಟು ಭ್ರಷ್ಟಾಚಾರವನ್ನು ಮುಂದಿಟ್ಟುಕೊಂಡು, ಎಎಪಿಯ ಯೋಜನೆಗಳ್ನು ಕದ್ದು ಕಾಂಗ್ರೆಸ್ ಅಧಿಕಾರಕ್ಕೇರಿದೆ. ಅವರ ಗ್ಯಾರಂಟಿ ಯೋಜನೆಗಳು ಯಾರಿಗೂ ತಲುಪುತ್ತಿಲ್ಲ. ಏಳು ತಿಂಗಳೂ ಕಳೆದರೂ ಖಾತರಿಗಳನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ. ಬರದಿಂದಾಗಿ ರಾಜ್ಯದಲ್ಲಿ ಪರಿಸ್ಥಿತಿ ಹದಗೆಟ್ಟಿದ್ದರೂ, ಸರ್ಕಾರ ಆದ್ಯತೆಯ ಮೇರೆಗೆ ಪರಿಹಾರ ಕಂಡುಕೊಂಡಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ಕಾಂಗ್ರೆಸ್‌ಗೆ ವಿರೋಧ ಪಕ್ಷವೇ ಇಲ್ಲ. ಸದನದಲ್ಲಿ ಬರ ಪರಿಸ್ಥಿತಿಯನ್ನು ಚರ್ಚೆಗೆ ತೆಗೆದುಕೊಳ್ಳಲು ಬಿಜೆಪಿ ನಾಯಕರೇ ಅವಕಾಶ ನೀಡಿಲ್ಲ. ಭ್ರಷ್ಟರಹಿತ ಸರ್ಕಾರ ನೀಡುತ್ತೇವೆ ಎಂದು ಮೋದಿ ಹೇಳುತ್ತಾರೆ. ಆದರೆ, ಅದೇ ಭ್ರಷ್ಟಾಚಾರದಿಂದಲೇ ಕೆಎಸ್ ಈಶ್ವರಪ್ಪ ರಾಜೀನಾಮೆ ನೀಡಿದರು. ಮಾಡಾಳ್ ವಿರೂಪಾಕ್ಷಪ್ಪ ಸಿಕ್ಕಿಬಿದ್ದರು. ಕುಟುಂಬ ರಾಜಕಾರಣದಿಂದ ದೇಶ ಅಭಿವೃದ್ಧಿಯಾಗಲ್ಲ ಎಂದು ಮೋದಿ ಹೇಳುತ್ತಾರೆ ಆದರೆ, ಯಡಿಯೂರಪ್ಪನವರ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡಲಾಗಿದೆ ಎಂದು ದೂರಿದರು.

ಕಾಂಗ್ರೆಸ್ ಕೂಡ ಇದರಿಂದ ಹೊರತಾಗಿಲ್ಲ. ಪ್ರಜಾಪ್ರಭುತ್ವವನ್ನು ಹತ್ತಿಕ್ಕಲಾಗುತ್ತಿದೆ. ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರ ರೈತರ ವಿಚಾರದಲ್ಲಿ ಗಮನಹರಿಸಬೇಕು. ಕಬ್ಬು ಬೆಳೆಗಾರರಿಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ. ರೈತರಿಗೆ ಕರೆಂಟ್ ಕೊಡುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಜನರ ಮುಂದಿಡಲೆಂದೇ ಹಳ್ಳಿ ಹಳ್ಳಿಗಳಿಗೆ ತೆರಳುತ್ತಿದ್ದೇವೆ. ಕಳೆದ 70 ವರ್ಷಗಳಿಂದ ಆಳಿದ ಪಕ್ಷಗಳಿಗೆ ಪರ್ಯಾಯವಾಗಿರುವುದು ಎಎಪಿ. ಇದನ್ನು ಸಾರ್ವಜನಿಕರ ಗಮನಕ್ಕೆ ತರುತ್ತಿದ್ದೇವೆ ಎಂದರು.

ಈ ಎಲ್ಲಾ ಸಮಸ್ಯೆಗಳನ್ನು ಜನರ ಮುಂದಿಟ್ಟು, ನಮಗೂ ಒಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದೇವೆ. ಜಾತಿ ರಾಜಕಾರಣ, ಕುಟುಂಬ ರಾಜಕಾರಣವನ್ನು ಧಿಕ್ಕರಿಸಿ ಎಎಪಿಗೆ ಅವಕಾಶ ನೀಡಿ ಎಂದು ಜನರನ್ನು ಕೇಳುತ್ತೇವೆ. ಪ್ರತಿ ಜಿಲ್ಲೆಯಲ್ಲೂ, ತಾಲ್ಲೂಕಿನ ಹಳ್ಳಿಗಳಲ್ಲಿ ಅರಳಿಕಟ್ಟೆ; ಬನ್ನಿ ಮಾತನಾಡೋಣ ಕಾರ್ಯಕ್ರಮ ನಡೆಸುತ್ತಿದ್ದೇವೆ. ಹಳ್ಳಿಗಳಲ್ಲಿ ಶಿಕ್ಷಣದ ಗುಣಮಟ್ಟ ಸರಿಯಾಗಿದೆಯಾ?. ಆರೋಗ್ಯದ ವ್ಯವಸ್ಥೆ, ರೈತರ ಶ್ರಮಕ್ಕೆ ಬೆಲೆ, ಯುವಕರಿಗೆ ಅವಕಾಶ, ಮಹಿಳೆಯರಿಗೆ ಸಮಾನ ಹಕ್ಕು, ಭ್ರಷ್ಟಾಚಾರ ನಿರ್ಮೂಲನೆ, ಕುಟುಂಬ ರಾಜಕಾರಣ ನಿರ್ಮೂಲನೆಯ ವಿಚಾರಗಳನ್ನಿಟ್ಟುಕೊಂಡು ನಾವು ಹಳ್ಳಿ ಹಳ್ಳಿಗೆ ತೆರಳುತ್ತಿದ್ದೇವೆ ಎಂದರು.

ಬಿಜೆಪಿ ನಾಯಕ ಗೂಳಿಹಟ್ಟಿ ಶೇಖರ್ ಅವರಿಗೆ ಆಗಿರುವುದು ತಪ್ಪು. ಈ ಘಟನೆಯು ಸರಿಯಲ್ಲ. ಅವರ ಜಾತಿಯನ್ನು ಕೇಳಿ ಆಹ್ವಾನವಿಲ್ಲ ಎಂದು ಹೇಳಿದ್ದರೆ ತಪ್ಪು. ಇಂತಹ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರಿಗೆ ಅರಿವು ಮೂಡಿಸುವುದೇ ನಮ್ಮ ಕೆಲಸ ಎಂದು ಹೇಳಿದರು. 

ಮುಂದಿನ ಜಿಲ್ಲಾ ಮತ್ತು ತಾಲ್ಲೂಕು ಚುನಾವಣೆಯಲ್ಲಿ ನಾವು ಪ್ರಯತ್ನ ಮಾಡುತ್ತೇವೆ. ಸಂಸತ್ತಿನ ಚುನಾವಣೆಗೆ ರಾಷ್ಟ್ರ ಮಟ್ಟದ ನಾಯಕರ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ಮುಂದಿನ ಏಳರಿಂದ ಎಂಟು ತಿಂಗಳಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇವೆ. ಕಳೆದ ವಿಧಾನಸಭೆಯಲ್ಲಿ ಹೆಚ್ಚಿನ ಜನರನ್ನು ಪಕ್ಷದಿಂದ ನಿಲ್ಲಿಸಲಾಗಿತ್ತು. ಉಚಿತ ಯೋಜನೆಗಳಿಂದ ದೇಶ ಅಭಿವೃದ್ಧಿಯಾಗಲ್ಲ ಎಂದು ಪ್ರಧಾನಿ ಹೇಳಿದರು. ಆದರೆ, ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯೇ ಉಚಿತಗಳನ್ನು ಘೋಷಿಸಿದೆ. ಮಹುವಾ ಮೊಯಿತ್ರಾ ಅವರನ್ನು ಉಚ್ಛಾಟನೆ ಮಾಡಿರುವುದು ಬಿಜೆಪಿಯ ಉದ್ದೇಶಪೂರ್ವಕ ಕೃತ್ಯವಾಗಿದ್ದು, ಅದು ಸರಿಯಲ್ಲ. 

1930ರಲ್ಲಿ ಜಾತಿ ಗಣತಿ ನಡೆದಿತ್ತು. ಇದಾದ ನಂತರ ಭಾರತದಲ್ಲಿ ಈವರೆಗೂ ಜಾತಿ ಗಣತಿಯಾಗಿಲ್ಲ. ಜಾತಿಗಣತಿಯಿಂದ ಎಲ್ಲಾ ಜನಾಂಗಕ್ಕೂ ಮೀಸಲಾತಿ ನೀಡಲು ಸಾಧ್ಯ. ವೈಜ್ಞಾನಿಕವಾಗಿ ಜಾತಿಗಣತಿ ನಡೆಸಿ. ಸಿದ್ದರಾಮಯ್ಯ ಅವರು 2013ರಲ್ಲಿ ಜಾತಿಗಣತಿ ವರದಿಯನ್ನು ಸ್ವೀಕರಿಸಲಿಲ್ಲ. ಆನಂತರ ಬಂದ ಯಾವುದೇ ಮುಖ್ಯಮಂತ್ರಿಗಳು ವರದಿಯನ್ನು ಸ್ವೀಕರಿಸಲಿಲ್ಲ. ಜಾತಿಗಣತಿ ಸ್ವೀಕಾರಕ್ಕೆ ಸಿದ್ದರಾಮಯ್ಯ ಇದೀಗ ನೆಪ ಹೇಳುತ್ತಿದ್ದಾರೆ. ಜಾತಿಗಣತಿಯನ್ನು ಅಂಗೀಕರಿಸಬೇಕು. ಇಡೀ ದೇಶದಲ್ಲಿಯೇ ಜಾತಿಗಣತಿ ಕಡ್ಡಾಯವಾಗಿ ಆಗಬೇಕು. ಜಾತಿಗಣತಿ ಆಧಾರದ ಮೇಲೆ ಮೀಸಲಾತಿ ನೀಡಬೇಕು. ಜಾತಿಗಣತಿ ಸ್ವೀಕರಿಸದಿದ್ದರೆ ನಾವು ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT