ರಾಜ್ಯ

ಮಡಿಕೇರಿ: ಕೇರಳ ಮೂಲದ ಇಬ್ಬರ ಕಾರನ್ನು ಅಡ್ಡಗಟ್ಟಿ 50 ಲಕ್ಷ ರೂ. ದರೋಡೆ ಮಾಡಿದ ದುಷ್ಕರ್ಮಿಗಳು

Ramyashree GN

ಮಡಿಕೇರಿ: ಮಡಿಕೇರಿಯ ಪೊನ್ನಂಪೇಟೆ ತಾಲ್ಲೂಕಿನ ದೇವರಪುರದಲ್ಲಿ ಕೇರಳ ಮೂಲದ ಇಬ್ಬರ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪೊಂದು 50 ಲಕ್ಷ ರೂ. ದೋಚಿ, ಕಾರನ್ನು ಹೈಜಾಕ್ ಮಾಡಿದೆ.

ಸಂತ್ರಸ್ತರನ್ನು ಕೇರಳದ ಗುತ್ತಿಗೆದಾರ ಶಮ್ಜಾದ್ ಕೆ. ಮತ್ತು ಅವರ ಸಹಚರ ಎನ್ನಲಾಗಿದ್ದು, ಮೈಸೂರಿನಿಂದ ಕೇರಳಕ್ಕೆ ಹಿಂದಿರುಗುತ್ತಿದ್ದಾಗ 10 ರಿಂದ 15 ಮಂದಿಯಿದ್ದ ದುಷ್ಕರ್ಮಿಗಳ ಗುಂಪೊಂದು ಕಾರನ್ನು ಅಡ್ಡಗಟ್ಟಿದೆ. ಮಲಯಾಳಂ ಭಾಷೆಯಲ್ಲಿ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದ ಅವರು, ಚಿನ್ನಾಭರಣ ಮಾರಾಟ ಮಾಡಿ ತರುತ್ತಿದ್ದ ಹಣವನ್ನು ದೋಚಿದ್ದಾರೆ ಎನ್ನಲಾಗಿದೆ.

ದುಷ್ಕರ್ಮಿಗಳು ಸಂತ್ರಸ್ತರ ಕಾರನ್ನು ಅಡ್ಡಗಟ್ಟಿದ ಬಳಿಕ ಅವರನ್ನು ಮತ್ತೊಂದು ವಾಹನದಲ್ಲಿ ಕರೆದೊಯ್ದಿದ್ದಾರೆ. ನಂತರ ಅವರನ್ನು ಮಧ್ಯದಲ್ಲಿಯೇ ಇಳಿಸಿ, ಹಣ ದೋಚಿ ಪರಾರಿಯಾಗಿದ್ದಾರೆ. ಡಿಸೆಂಬರ್ 9 ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಇಬ್ಬರೂ ಮೈಸೂರಿನಿಂದ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ.

ದೂರಿನ ಪ್ರಕಾರ, ದೇವರಪುರ ಬಳಿ ಕೆಟ್ಟು ನಿಂತಿದ್ದ ಲಾರಿಯೊಂದರ ಬಳಿ ದುಷ್ಕರ್ಮಿಗಳ ಗುಂಪು ಕಾರನ್ನು ಅಡ್ಡಗಟ್ಟಿದೆ. ನಂತರ, ಶಮ್ಜಾದ್ ಮತ್ತು ಅವರ ಸಹಚರ ಮುಂಜಾನೆ 4 ಗಂಟೆಯ ಸುಮಾರಿಗೆ ಪತ್ರಿಕೆ ವಾಹನದ ಸಹಾಯದಿಂದ ವಿರಾಜಪೇಟೆ ಪೊಲೀಸ್ ಠಾಣೆಗೆ ತಲುಪಿದ್ದಾರೆ.

ಹೆಚ್ಚಿನ ತನಿಖೆಯಿಂದ ಸಂತ್ರಸ್ತರನ್ನು ಬಿಟ್ಟು ಹೋಗಿದ್ದ ಸ್ಥಳವನ್ನು ಗೋಣಿಕೊಪ್ಪ ಸಮೀಪದ ದೇವರಪುರ ಎಂದು ತಿಳಿದುಬಂದಿದೆ. ಈ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರು ಸ್ವೀಕರಿಸಿದ ಕೊಡಗು ಪೊಲೀಸರು ಕ್ಷಿಪ್ರವಾಗಿ ತನಿಖೆ ಆರಂಭಿಸಿದ್ದಾರೆ. ಕೊಳತೋಡು ಗ್ರಾಮದಲ್ಲಿ ಕಳ್ಳತನವಾದ ಕಾರು ಪತ್ತೆಯಾಗಿದೆ. ಸ್ಥಳಕ್ಕೆ ತಹಶೀಲ್ದಾರ ಡಾ. ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹೆಚ್ಚುವರಿ ಎಸ್ಪಿ ಮತ್ತು ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಮೂವರು ಇನ್ಸ್‌ಪೆಕ್ಟರ್‌ಗಳು ಮತ್ತು ಏಳು ಸಬ್‌ಇನ್ಸ್‌ಪೆಕ್ಟರ್‌ಗಳನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಎಸ್ಪಿ ಕೆ.ರಾಮರಾಜನ್ ಘೋಷಿಸಿದರು.

SCROLL FOR NEXT