ರಾಜ್ಯ

ಕರ್ನಾಟಕದ ಅಭಿವೃದ್ಧಿಯಲ್ಲಿ ಎಸ್.ನಿಜಲಿಂಗಪ್ಪನವರ ಕೊಡುಗೆ ಅಪಾರ : ಮುಖ್ಯಮಂತ್ರಿ ಸಿದ್ದರಾಮಯ್ಯ

Nagaraja AB

ಬೆಂಗಳೂರು: ಐವತ್ತು ವರ್ಷಗಳ ಕಾಲ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತೊಡಗಿದ್ದ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ಕರ್ನಾಟಕದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಇಂದು ದಿವಂಗತ ಎಸ್.ನಿಜಲಿಂಗಪ್ಪನವರ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಎಸ್. ನಿಜಲಿಂಗಪ್ಪನವರು ರಾಜ್ಯ ಕರ್ನಾಟಕವೆಂದು ನಾಮಕರಣವಾದ ನಂತರದ ಮೊದಲ ಮುಖ್ಯಮಂತ್ರಿ ಆಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರು ಮಹಾತ್ಮಾ ಗಾಂಧಿ ಹಾಗೂ ವಿನೋಬಾ ಭಾವೆಯವರ ಆದರ್ಶಗಳಿಂದ ಪ್ರೇರಿತರಾಗಿದ್ದರು ಎಂದರು. 

ಕರ್ನಾಟಕದ ಏಕೀಕರಣದಲ್ಲಿ ಭಾಗಿಯಾಗಿದ್ದರು. ಅವರ ಅವಧಿಯಲ್ಲಿ ರೈತರ ಒಳಿತಿಗಾಗಿ ರಾಜ್ಯದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿದ್ದರು. ಅವಿಭಾಜಿತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅವರ ಆದರ್ಶಗಳು ಎಲ್ಲರಿಗೂ ದಾರಿದೀಪವಾಗಲಿ ಎಂದು ಹಾರೈಸಿದರು.

ಕಾಂಗ್ರೆಸ್ ನವರನ್ನೇ ಗುರಿಯಾಗಿಸಿಕೊಂಡು ಐಟಿ ದಾಳಿ : ಜಾರ್ಖಂಡ್ ಸಂಸದರ ಮನೆಯಲ್ಲಿ ಐಟಿ ದಾಳಿಯಾಗಿ ಹಣ ದೊರೆತಿದ್ದು, ಅಲ್ಪಸಂಖ್ಯಾತರಿಗೆ ಆರ್ಥಿಕ ಸೌಲಭ್ಯವಿಲ್ಲವೆನ್ನುವ ಕಾಂಗ್ರೆಸ್ ನವರ ಮನೆಯಲ್ಲಿಯೇ ಅಪಾರ ಹಣ ದೊರೆಯುತ್ತಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ,  ಯಾರ ಬಳಿ ಬೇನಾಮಿ ಹಣ ದೊರೆತರೂ ಅದು ಕಾನೂನುರೀತ್ಯ ತಪ್ಪು. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲೇ ಬೇಕು. ಆದರೆ ಕಾಂಗ್ರೆಸ್ ಪಕ್ಷದವರನ್ನೇ ಗುರಿಯಾಗಿಸಿಕೊಂಡು ಐಟಿ ದಾಳಿಗಳನ್ನು ಮಾಡಲಾಗುತ್ತಿದೆ ಎಂದು ಟೀಕಿಸಿದರು. 

ಬಿಜೆಪಿ ಪಕ್ಷದವರ ಮೇಲೆ ಐಟಿದಾಳಿಗಳು ಆಗುತ್ತಿಲ್ಲ. ಬಿಜೆಪಿಯವರ ಮನೆಗಳ ಮೇಲೂ ಐಟಿ ದಾಳಿ ನಡೆದರೆ ಬೇನಾಮಿ ಹಣ ದೊರೆಯಬಹುದು ಎಂದರು.

SCROLL FOR NEXT