ರಾಜ್ಯ

ಬರ ಪರಿಸ್ಥಿತಿ ಎದುರಿಸಲು ಸಮಗ್ರ ಯೋಜನೆ ರೂಪಿಸಲಾಗಿದೆ: ಸಚಿವ ಕೃಷ್ಣ ಬೈರೇಗೌಡ

Manjula VN

ಬೆಂಗಳೂರು: ಬರ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಸಮಗ್ರ ಯೋಜನೆಯನ್ನು ರೂಪಿಸಿದೆ ಹಾಗೂ ಬರಪೀಡಿತ ಪ್ರದೇಶಗಳ ಪಟ್ಟಿಯನ್ನೂ ಸಿದ್ಧಪಡಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೋಮವಾರ ಹೇಳಿದರು.

ವಿಧಾನಸಭೆಯಲ್ಲಿ ಬರಗಾಲದ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೇರೆ ರಾಜ್ಯಗಳಿಗೆ ಮೇವು ಸಾಗಣೆಯನ್ನು ಈಗಾಗಲೇ ಸರ್ಕಾರ ನಿಷೇಧಿಸಿದೆ. ಸ್ಥಳೀಯ ಶಾಸಕರ ನೇತೃತ್ವದ ಕಾರ್ಯಪಡೆಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಲು ಮತ್ತು ಸಂತ್ರಸ್ತ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಮೇವಿನ ಬ್ಯಾಂಕ್ ಮತ್ತು ಆಶ್ರಯ ಕೇಂದ್ರಗಳನ್ನು ತೆರೆಯಲು ಅಧಿಕಾರ ನೀಡಲಾಗಿದೆ, 26 ಗ್ರಾಮಗಳು ತೀವ್ರ ನೀರಿನ ಅಭಾವವನ್ನು ಎದುರಿಸುತ್ತಿವೆ, ಬಿಕ್ಕಟ್ಟಿನಿಂದ ಬಾಧಿತವಾಗಿರುವ 6,237 ಗ್ರಾಮಗಳು ಮತ್ತು 914 ವಾರ್ಡ್‌ಗಳನ್ನು ಸರ್ಕಾರ ಗುರುತಿಸಿದೆ. ಒಟ್ಟಾರೆಯಾಗಿ, ಪರಿಸ್ಥಿತಿ ಹದಗೆಟ್ಟರೆ ಬರ ಪೀಡಿತ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು 3,836 ಖಾಸಗಿ ಬೋರ್‌ವೆಲ್‌ಗಳ ತೆರೆಯಲು ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ಬೋರ್‌ವೆಲ್ ಮಾಲೀಕರೊಂದಿಗೆ ಮಾತುಕತೆ ಕೂಡ ಪ್ರಗತಿಯಲ್ಲಿದೆ. ಸಂತ್ರಸ್ತರಿಗೆ 24 ಗಂಟೆಯೊಳಗೆ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಗದಗ ಮತ್ತು ಚಿತ್ರದುರ್ಗ ಜಿಲ್ಲೆಗಳು ಮೇವಿನ ಕೊರತೆ ಎದುರಿಸುತ್ತಿದ್ದು, ಸರ್ಕಾರ 7.6 ಲಕ್ಷ ಉಚಿತ ಮೇವಿನ ಕಿಟ್‌ಗಳನ್ನು ವಿತರಿಸಿದೆ. ಇದರಿಂದ ಮುಂದಿನ ಬೇಸಿಗೆವರೆಗೆ ಮೇವಿನ ಕೊರತೆ ನೀಗಲಿದೆ. ಬರಪೀಡಿತ ತಾಲ್ಲೂಕುಗಳಿಂದ ರೈತರು ವಲಸೆ ಹೋಗುವುದನ್ನು ತಡೆಯಲು MGNREGS ಅಡಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರೈತರ ಸಾಲವನ್ನು ಪುನರ್‌ರಚಿಸುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ ಎಂದರು.

ತುರ್ತು ಪರಿಹಾರ ಕಾಮಗಾರಿಗಾಗಿ ಜಿಲ್ಲಾಧಿಕಾರಿಗಳ ಬಳಿ 895 ಕೋಟಿ ರೂಪಾಯಿ ಇದೆ, 18,171 ಕೋಟಿ ರೂಪಾಯಿ ನೀಡುವಂತೆ ಮನವಿ ಮಾಡಿಕೊಂಡಿದ್ದರೂ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಂದನೆಗಳು ಬಂದಿಲ್ಲ ಎಂದು ಹೇಳಿದರು.

ಇದೇ ವೇಳೆ ಪ್ರತಿಭಟನಾ ನಿರತ ಬಿಜೆಪಿ ಸದಸ್ಯರನ್ನು ಕೃಷ್ಣ ಬೇರೈಗೌಡ ಅವರು ಟೀಕಿಸಿದರು. ಅಲ್ಲದೆ, ಬರ ಪರಿಹಾರ ಕೆಲಸಕ್ಕೆ ರಾಜ್ಯ ಸರ್ಕಾರಕ್ಕೆ ಹಣ ನೀಡುವಂತೆ ಕೇಂದ್ರದ ನಾಯಕರ ಮನವೊಲಿಸುವಂತೆ ಒತ್ತಾಯಿಸಿದರು.

ರೈತರಿಗೆ ತಲಾ 2 ಸಾವಿರ ರೂ.ಗಳನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ವಾರದಲ್ಲಿ ಪಾವತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಇದೇ ವೇಳೆ ಹೇಳಿದರು.

ಈ ನಡುವೆ ಬರ ಪರಿಹಾರ ಕೆಲಸಗಳಿಗೆ ಕನಿಷ್ಠ 10 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಮತ್ತು ಬ್ಯಾಂಕ್‌ಗಳು ರೈತರ ಸಾಲ ವಸೂಲಾತಿ ಮಾಡುವುದನ್ನು ತಡೆಯಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳ ಸದಸ್ಯರು ವಿಧಾನಪರಿಷತ್ ನಲ್ಲಿ ಸರ್ಕಾರಕ್ಕೆ ಒತ್ತಾಯಿಸಿದರು.

ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ರಾಜ್ಯ ಸರ್ಕಾರ 4,000 ರೂ.ಗಳ ಜೊತೆಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ತಲಾ 6,000 ರೂ ನೀಡಬೇಕು ಎಂದು ಆಗ್ರಹಿಸಿದರು.

ಸಂಕಷ್ಟಕ್ಕೊಳಗಾಗಿರುವ ರೈತರಿಗೆ ಸರಕಾರ ಕನಿಷ್ಠ 10 ಸಾವಿರ ರೂ.ಗಳನ್ನು ನೀಡಬೇಕು ಎಂದು ಎಂಎಲ್‌ಸಿ ಪೂಜಾರ್ ಆಗ್ರಹಿಸಿದರು.

SCROLL FOR NEXT