ರಾಜ್ಯ

ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಮುಂಡರಗಿ ಶಿಲ್ಪಿ ಭಾಗಿ!

Manjula VN

ಗದಗ (ಮುಂಡರಗಿ): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸುವ ಅವಕಾಶ ಗದಗ ಜಿಲ್ಲೆಯ ಮುಂಡರಗಿ ಶಿಲ್ಪಿ ನಾಗಮೂರ್ತಿ ಅವರಿಗೆ ಲಭಿಸಿದೆ.

ರಾಮ ಮಂದಿರ ನಿರ್ಮಾಣದಲ್ಲಿ ಸಣ್ಣ, ಪುಟ್ಟ ಮೂರ್ತಿ ಕೆತ್ತನೆ, ಸ್ತಂಭ ಹಾಗೂ ಇನ್ನಿತರ ಕಲ್ಲಿನ ಕಟ್ಟಡ ಕಾರ್ಯ ನಿರ್ವಹಿಸಲು ನಾಗಮೂರ್ತಿ ಅವರಿಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಆಹ್ವಾನ ನೀಡಿದೆ.

ನಾಗಮೂರ್ತಿ ಅವರು ಮೂಲತಃ ಕೊಪ್ಪಳ ಜಿಲ್ಲೆ ಕಾತರಕಿ ಗ್ರಾಮದ ನಿವಾಸಿ. ಪ್ರಸ್ತುತ ಮುಂಡರಗಿಯಲ್ಲಿ ಶಿಲ್ಪ ಕಲೆ ಮಾಡುತ್ತಿದ್ದಾರೆ. ನಾಗಮೂರ್ತಿ ಮೈಸೂರು ಜಿಲ್ಲೆ ಎಚ್.ಡಿ ಕೋಟೆಯಲ್ಲಿ ದೊರೆಯುವ ಕರಿಕಲ್ಲುಗಳನ್ನ (ಕೃಷ್ಣ ಶಿಲೆ) ಬಳಸಿ ಮೂರ್ತಿ ತಯಾರಿ ಮಾಡುತ್ತಾರೆ.

ವಿಶ್ವಕರ್ಮ ಸಮುದಾಯಕ್ಕೆ ಸೇರಿದ ನಾಗಮೂರ್ತಿಸ್ವಾಮಿ ಬಾಲ್ಯದಲ್ಲಿಯೇ ಶಿಲ್ಪಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀಗಂಧ ಕಲಾ ಸಂಕಿರಣ ಕಲಾ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿರುವ ನಾಗಮೂರ್ತಿ ಅವರು, ಕೆಲ ವರ್ಷ ಶಿಲ್ಪ ಕಲೆಯ ಬಗ್ಗೆ ಮುಂಡರಗಿ ವೆಂಕಟೇಶ ಸುತಾರ ಎಂಬವರ ಹತ್ತಿರ ತರಬೇತಿ ಪಡೆದು, ಈಗ ಸ್ವತಂತ್ರವಾಗಿ ಸ್ವ ಉದ್ಯೋಗ ಆರಂಭಿಸಿದ್ದಾರೆ.

ಶಿಲ್ಪಕಲೆಯಲ್ಲಿ ಬಹುಕೌಶಲ ಹೊಂದಿರುವ ನಾಗಮೂರ್ತಿ ಅವರಿಗೆ, ಇದೀಗ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಆಮಂತ್ರಣ ನೀಡಿರುವುದು ಬಹಳ ಸಂತಸ ತಂದಿದೆ.

ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳಲಿರುವ ನಾಗಮೂರ್ತಿಗೆ ಸ್ಥಳೀಯರು ಸನ್ಮಾನ ಮಾಡಿ ಗೌರವಿಸಿ ಕಳಿಸಿಕೊಟ್ಟಿದ್ದಾರೆ.

ಇನ್ನು ನಾಗಮೂರ್ತಿ ಅವರು ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆದು ಜನ್ಮ ಪಾವನ ಮಾಡಿಕೊಳ್ಳುತ್ತೇನೆ. ಈ ಸೌಭಾಗ್ಯ ತನಗೆ ಒದಗಿ ಬಂದಿರುವುದು ತುಂಬಾ ಖುಷಿಯಾಗಿದೆ. ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ನನಗೆ ಆಹ್ವಾನ ಬಂದಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

SCROLL FOR NEXT