ರಾಜ್ಯ

ಹುಕ್ಕಾ ಬಾರ್ ನಿಯಂತ್ರಣಕ್ಕೆ ಶೀಘ್ರದಲ್ಲೇ ವಿಶೇಷ ಕಾನೂನು!

Manjula VN

ಬೆಳಗಾವಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಹುಕ್ಕಾ ಬಾರ್‌ಗಳ ನಿಯಂತ್ರಿಸಲು ರಾಜ್ಯ ಸರ್ಕಾರ ವಿಶೇಷ ಕಾನೂನು ರೂಪಿಸಲಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಮಂಗಳವಾರ ಹೇಳಿದರು.

ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ, ಹುಕ್ಕಾ ಬಾರ್​ಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಜಯನಗರ ಶಾಸಕ ರಾಮಮೂರ್ತಿ ಗಮನ ಸೆಳೆದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಹುಕ್ಕಾ ಬಾರ್​ಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಅವರಿಗೆ ಲೈಸೆನ್ಸ್ ಯಾರು ಕೊಟ್ಟಿದ್ದಾರೆ, ಹೇಗೆ ಪಡೆದರು ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಜತೆಗೆ, ಇತ್ತೀಚೆಗೆ ಹುಕ್ಕಾ ಬಾರ್‌ನಲ್ಲಿ ಸಿಲಿಂಡರ್ ಸ್ಫೋಟಗೊಂಡ ಘಟನೆಯನ್ನು ಪ್ರಸ್ತಾಪಿಸಿದರು.

ಇದಕ್ಕೆ ಉತ್ತರ ನೀಡಿದ ಪರಮೇಶ್ವರ್ ಅವರು, ಹುಕ್ಕಾ ಬಾರ್‌ಗಳು ಜನರ ಮೇಲೆ ಅದರಲ್ಲೂ ವಿಶೇಷವಾಗಿ ಯುವಕರ ಮೇಲೆ ಪರಿಣಾಮ ಬೀರುತ್ತಿವೆ, ಆದರೆ, ಈ ಬಗ್ಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಹುಕ್ಕಾ ಬಾರ್ ನಡೆಸಲು ಪರವಾನಗಿ ನೀಡುವ ಅಧಿಕಾರ ಬಿಬಿಎಂಪಿಗೆ ಇಲ್ಲ. ಈ ಮೊದಲೇ ಅದನ್ನು ನಿಯಂತ್ರಿಸಲು ಪ್ರಯತ್ನಿಸಿದ್ದೆವು. ಆದರೆ ಸಾಧ್ಯವಾಗಲಿಲ್ಲ. ಆಹಾರ ಸುರಕ್ಷತಾ ಇಲಾಖೆಯು ಕಾರ್ಯನಿರ್ವಹಿಸಲು ಅನುಮತಿ ನೀಡಿದೆ. ನ್ಯಾಯಾಲಯದ ಆದೇಶವು ಹುಕ್ಕಾ ಬಾರ್‌ಗಳಿಗೆ ಯಾವುದೇ ಪರವಾನಗಿ ಅಗತ್ಯವಿಲ್ಲ ಎಂದು ಹೇಳುತ್ತದೆ. ನ್ಯಾಯಾಲಯಗಳ ಪ್ರಕಾರ, ನಿರ್ವಾಹಕರು ತಮ್ಮ ಆವರಣದಲ್ಲಿ ಹುಕ್ಕಾವನ್ನು ಬಳಸಬಹುದಾದ ಪ್ರತ್ಯೇಕ ಕೋಣೆಗಳನ್ನು ಹೊಂದಿರಬೇಕು, ”ಎಂದು ಹೇಳಿದರು.

ಇದೇ ವೇಳೆ ಅಗ್ನಿ ಅವಘಡ ಘಟನೆ ಕುರಿತು ಮಾತನಾಡಿ, ಅಗ್ನಿ ಅವಘಡದ ಬಗ್ಗೆ ಮಾಹಿತಿ ಇದೆ, ಇಂತಹ ಘಟನೆಗಳನ್ನು ತಡೆಯಲು ಸರ್ಕಾರ ಕಾನೂನು ತರಲಿದೆ ಎಂದು ತಿಳಿಸಿದರು.

ಈ ವೇಳೆ ರಾಜಾಜಿನಗರ ಬಿಜೆಪಿ ಶಾಸಕ ಸುರೇಶ್‌ಕುಮಾರ್‌ ಕೂಡ ಚರ್ಚೆಗೆ ಧ್ವನಿಗೂಡಿಸಿ, ನಗರದಲ್ಲಿ ಹುಕ್ಕಾ ಬಾರ್‌ಗಳು ಮಾರಕವಾಗುತ್ತಿವೆ. ಪಂಜಾಬ್, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತಮಿಳುನಾಡು ಮತ್ತು ಗುಜರಾತ್ ಸೇರಿದಂತೆ ಹತ್ತು ರಾಜ್ಯಗಳು ಹುಕ್ಕಾ ಬಾರ್‌ಗಳನ್ನು ನಿಷೇಧಿಸಿವೆ. ನಮ್ಮಲ್ಲೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಕಡಿವಾಣ ಹಾಕುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಆರೋಗ್ಯ ಮತ್ತು ಇತರ ಇಲಾಖೆಗಳೊಂದಿಗೆ ಮಾತನಾಡಿ ಅವುಗಳನ್ನು ನಿಷೇಧಿಸಿ,. ಇದು ಸಿಗರೇಟಿಗಿಂತ 200 ಪಟ್ಟು ಹೆಚ್ಚು ಅಪಾಯಕಾರಿಯಾಗಿದೆ ಎಂಬುದನ್ನು ನಾನು ಓದಿದ್ದೇನೆ" ಎಂದು ಹೇಳಿದರು.

ಪಂಜಾಬ್ ಗಿಂತ ಕರ್ನಾಟಕ ಹದಗೆಡುವ ಸ್ಥಿತಿಗೆ ತಲುವ ಮೊದಲು ಹುಕ್ಕಾ ಬಾರ್‌ಗಳನ್ನು ಮುಚ್ಚಬೇಕು ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಹೇಳಿದರು.

ನಗರ ಉಡ್ತಾ ಬೆಂಗಳೂರು ಆಗುವ ಮೊದಲು ಗೃಹ ಸಚಿವರು ಏನಾದರೂ ಮಾಡಬೇಕು ಎಂದು ಇದೇ ವೇಳೆ ರಾಮಮೂರ್ತಿ ಆಗ್ರಹಿಸಿದರು.

ಈ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪರಮೇಶ್ವರ್ ಅವರು, “ನಾಲ್ಕು ವರ್ಷಗಳಿಂದ ನೀವು ಈ ಬಗ್ಗೆ ಯಾವ ಕೆಲಸವನ್ನೂ ಮಾಡಿಲ್ಲ. ಹೀಗೆಂದು ನಾನು ನನ್ನನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಧೂಮಪಾನವು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಈ ನಿಟ್ಟಿನಲ್ಲಿ ಹೊಸ ಕಾನೂನು ರೂಪಿಸಲಾಗುತ್ತದೆ ಎಂದು ಹೇಳಿದರು.

SCROLL FOR NEXT