ರಾಜ್ಯ

ಸಂಸತ್ ಭದ್ರತಾ ಲೋಪ: ಪ್ರತಾಪ್ ಸಿಂಹ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರ ತೀವ್ರ ಪ್ರತಿಭಟನೆ, ಸಂಸದರ ಪದಚ್ಯುತಿಗೆ ಆಗ್ರಹ

Srinivasamurthy VN

ಮೈಸೂರು: ಸಂಸತ್ ಭವನದಲ್ಲಿ ನಡೆದ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಂತುಕರಿಗೆ ಪಾಸ್ ನೀಡಿದ ಆರೋಪದ ಮೇರೆಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ್ದು, ಸಂಸದರ ಪದಚ್ಯುತಿಗೆ ಆಗ್ರಹಿಸಿದರು.

ಸಂಸತ್ ಭವನದ ಆಗಂತುಕರಿಗೆ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಕಚೇರಿಯಿಂದಲೇ ಪಾಸ್ ಗೆ ಶಿಫಾರಸ್ಸು ಪತ್ರ ನೀಡಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಇಂದು ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಕಚೇರಿ ಎದುರು ಮೈಸೂರು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಸಂಸದರ ಪ್ರತಾಪ್‌ ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌ ಕಾರ್ಯಕರ್ತರು ಧಿಕ್ಕಾರದ ಘೋಷಣೆ ಕೂಗಿ ಕಿಡಿಕಾರಿದರು.

ಪಾರ್ಲಿಮೆಂಟಿಗೆ ನುಗ್ಗಿ ಭಯೋತ್ಪಾದನಾ ಕೃತ್ಯ ನಡೆಸುವ ಸಂಚಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಪ್ರತಾಪ್ ಸಿಂಹರವರೇ ನೇರ ಹೊಣೆ ಎಂದು ಘೋಷಣೆ ಕೂಗಿದರು. ಅಲ್ಲದೆ ಕೂಡಲೇ ಸಂಸದ ಪ್ರತಾಪ್ ಸಿಂಹ ಅವರನ್ನು ಪದಚ್ಯುತಗೊಳಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಸಂಸದರ ಕಚೇರಿಯ ಕಾಂಪೌಡ್ ಗೋಡೆ ಏರಿ ಒಳಗೆ ನುಗ್ಗಲು ಯತ್ನಿಸಿದರಾದರೂ ಪೊಲೀಸರು ಅವರನ್ನು ತಡೆದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆಯಿತು.

ಪ್ರತಾಪ್ ಸಿಂಹ ವಿರುದ್ಧದ ಆರೋಪಗಳೇನು?
ಕಲಾಪ ನಡೆಯುವ ವೇಳೆ ಸಂಸತ್‌ ಭವನದೊಳಗೆ ನುಗ್ಗಿದ್ದವರ ಪೈಕಿ ಓರ್ವ ಮೈಸೂರಿನ ಮನೋರಂಜನ್‌ಗೆ ಸಂಸದ ಪ್ರತಾಪ್‌ ಸಿಂಹ ಅವರಿಂದ ಪಾಸ್‌ ನೀಡಲಾಗಿತ್ತು ಎಂಬ ಮಾಹಿತಿ ಹೊರ ಬಿದ್ದಿದೆ. ಮನೋರಂಜನ್ ಮೈಸೂರಿನ ಸಂಸದ ಪ್ರತಾಪಸಿಂಹ ಅವರ ಕಚೇರಿಯಿಂದ ಮೂರು ಪಾಸ್ ಪಡೆದುಕೊಂಡಿದ್ದ ಎನ್ನಲಾಗಿದೆ. ಆ‌ ಮೂಲಕ ಸದನ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತುಕೊಳ್ಳುವ ಅವಕಾಶ ಪಡೆದುಕೊಂಡಿದ್ದನು ಎಂದು ವರದಿಗಳು ತಿಳಿಸಿವೆ.

SCROLL FOR NEXT