ರಾಜ್ಯ

ಸಿ.ಪಿ.ಯೋಗೇಶ್ವರ್ ಬಾವ ಮಹದೇವಯ್ಯ ಕೊಲೆ ಪ್ರಕರಣ: ತಮಿಳುನಾಡಿನಲ್ಲಿ ಆರೋಪಿ ಸೆರೆ

Nagaraja AB

ಚನ್ನಪಟ್ಟಣ: ಮಾಜಿ ಸಚಿವ, ಹಾಲಿ ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಬಾವ ಮಹದೇವಯ್ಯ ಅವರ ಕೊಲೆ ಪ್ರಕರಣದ ಆರೋಪಿಯೊಬ್ಬನನ್ನು ತಮಿಳುನಾಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ. 

ಮುರುಗನ್ ಬಂಧಿತ ಆರೋಪಿ. ತಮಿಳುನಾಡು ಮೂಲದ ಈತ ಕೆಲ ವರ್ಷಗಳಿಂದ ಮಹದೇವಯ್ಯ ಅವರ ಪಕ್ಕದ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಮಹದೇವಯ್ಯ ಅವರಿಗೆ ಪರಿಚಿತನಾಗಿದ್ದ ಆರೋಪಿಗೆ ಅವರ ಹಣದ ವಹಿವಾಟಿನ ಬಗ್ಗೆಯೂ ಮಾಹಿತಿ ಇತ್ತು ಎನ್ನಲಾಗಿದೆ. ಹಾಗಾಗೀ ತನ್ನ ಸಹಚರರೊಂದಿಗೆ ಕೃತ್ಯವೆಸಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ. ಸದಸ್ಯ ಬಂಧಿತ ಆರೋಪಿ ಮುರುಗನ್ ನನ್ನು ತಮಿಳುನಾಡಿನಿಂದ ಕರೆತರಲಾಗುತ್ತಿದೆ. ಕೋರ್ಟ್ ಎದುರು ಹಾಜರುಪಡಿಸಿದ ಬಳಿಕ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗುವುದು ಎಂದು ಮೂಲಗಳು ತಿಳಿಸಿವೆ.

ಮಾಜಿ ಸಚಿವ ಸಿ. ಪಿ. ಯೋಗೇಶ್ವರ್ ಅವರ ಸಹೋದರಿ ಪುಷ್ಪಾ ಅವರ ಪತಿ ಮಹದೇವಯ್ಯ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಅವರು ಡಿಸೆಂಬರ 1ರ ಶುಕ್ರವಾರ ರಾತ್ರಿ  ಚಕ್ಕರೆ ಗ್ರಾಮದ ತೋಟದ ಮನೆಯಿಂದ ನಾಪತ್ತೆಯಾಗಿದ್ದರು. ಬಳಿಕ ಮಹದೇಶ್ವರ ಬೆಟ್ಟದಲ್ಲಿ ಟವರ್ ಲೊಕೇಶನ್ ಪತ್ತೆ ಆಗಿತ್ತು.

ತದನಂತರ  ಚಾಮರಾಜನಗರದ ಹನೂರು ತಾಲೂಕಿನ ರಾಮಾಪುರ ಗ್ರಾಮದ ನಿರ್ಜನ ಪ್ರದೇಶದಲ್ಲಿ ಮಹದೇವಯ್ಯ ಅವರ ಮೃತದೇಹ ಇದೀಗ ಪತ್ತೆಯಾಗಿತ್ತು. ಅವರ ಕಾರು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಗ್ರಾಮ ಬಳಿ ಪತ್ತೆಯಾಗಿತ್ತು. ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿದ್ದರು. 

SCROLL FOR NEXT