ರಾಜ್ಯ

ಸಹಕಾರ ಬ್ಯಾಂಕ್ ಗಳಲ್ಲಿರುವ ರೈತರ ಸಾಲದ ಬಡ್ಡಿ ಮನ್ನಾ: ಸಿಎಂ ಸಿದ್ದರಾಮಯ್ಯ ಘೋಷಣೆ

Nagaraja AB

ಬೆಳಗಾವಿ: ರಾಜ್ಯದ ರೈತರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸಹಕಾರ ಬ್ಯಾಂಕುಗಳಲ್ಲಿರುವ ರೈತರ ಬಡ್ಡಿ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಚಳಿಗಾಲ ಅಧಿವೇಶನದ ಕೊನೆಯ ದಿನವಾದ ಇಂದು ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಸಮಸ್ಯೆ ಕುರಿತು ಮಾತನಾಡುತ್ತಿದ್ದ ಮುಖ್ಯಮಂತ್ರಿ, ಈ ಬಾರಿ ರಾಜ್ಯದಲ್ಲಿ ಎದುರಾಗಿರುವ ಬರಗಾಲದ ಹಿನ್ನೆಲೆಯಲ್ಲಿ  ರೈತರು ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಅಸಲನ್ನು ಕಟ್ಟಿದರೆ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡಲು ನಮ್ಮ ಸರ್ಕಾರ ತೀರ್ಮಾನಿಸಿದೆ ಎಂದರು.

ಬಡ್ಡಿ ಒಟ್ಟು 300 ಕೋಟಿಯಷ್ಟು ಇರಬಹುದು. ಅದನ್ನು ಮನ್ನಾ ಮಾಡುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದರು. ಇನ್ನು ಬಳ್ಳಾರಿ, ರಾಯಚೂರು ವಿಮಾನ ನಿಲ್ದಾಣಗಳ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳ ಬಗ್ಗೆ ಸಿದ್ದರಾಮಯ್ಯ ಘೋಷಿಸಿದರು. ರೈತರ ಬಡ್ಡಿ ಮನ್ನಾ ಘೋಷಣೆಗೆ ಮಾಜಿ ಸಹಕಾರ ಸಚಿವ ಶಾಸಕ ಎಸ್‌ಟಿ ಸೋಮಶೇಖರ್ ಸೇರಿದಂತೆ ಹಲವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದರು. 

ಸಿದ್ದರಾಮಯ್ಯ ಮೊದಲು ಸಿಎಂ ಇದ್ದಾಗ 50 ಸಾವಿರದವರೆಗೆ ಸಾಲ ಮನ್ನಾ ಹಾಗೂ ಸಮ್ಮಿಶ್ರ ಸರ್ಕಾರದ ಅವಧಿಯ 1 ಲಕ್ಷದವರೆಗಿನ ಸಾಲಮನ್ನಾ ಆಗಿತ್ತು. ಈ ಸಾಲಮನ್ನಾ ಮಾಡಲು ಯಡಿಯೂರಪ್ಪ ಸಿಎಂ ಇದ್ದಾಗ 5,700 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಇನ್ನೂ 320 ಕೋಟಿ ರೂ ಬಾಕಿ ಕೊಡಬೇಕಿದೆ. ಈ ಬಾಕಿ ಹಣ ಕೊಟ್ರೆ ಸಹಕಾರ ವಲಯದ ಸಾಲ ಮನ್ನಾ ಪೂರ್ಣ ಆಗಲಿದೆ ಅಂತ ಸೋಮಶೇಖರ್ ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ರೈತರ ಎರಡು ಲಕ್ಷ ರೂಪಾಯಿವರೆಗಿನ ಸಾಲ ಮನ್ನಾ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು. ಬರದಿಂದ ಕಂಗೆಟ್ಟ ರೈತರಿಗೆ ಪ್ರತೀ ಎಕರೆಗೆ 25 ಸಾವಿರ ಪರಿಹಾರ ಘೋಷಣೆ ಮಾಡಬೇಕು ಅಂತ ಆಗ್ರಹಿಸಿದರು. 
 

SCROLL FOR NEXT