ರಾಜ್ಯ

ಸಂಸತ್ ಭದ್ರತಾ ಲೋಪ: ಪೂರ್ವಾನುಮತಿ ಇಲ್ಲದೆ ನಗರದಿಂದ ಹೊರ ಹೋಗದಿರಿ; ಆರೋಪಿ ಮನೋರಂಜನ್ ಕುಟುಂಬ ಸದಸ್ಯರಿಗೆ ಅಧಿಕಾರಿಗಳ ಸೂಚನೆ

Manjula VN

ಮೈಸೂರು: ಸಂಸತ್ತಿನ ಭದ್ರತಾ ಲೋಪ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಆರೋಪಿಗಳಾದ ಮನೋರಂಜನ್ ಮತ್ತು ಲಖನೌ ಮೂಲದ ಸಾಗರ್ ಶರ್ಮಾ ಅವರನ್ನು ಮೈಸೂರಿಗೆ ಕರೆತಂದು ವಿಚಾರಣೆ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಕಳೆದ ಮೇ ತಿಂಗಳಿನಲ್ಲಿ ಇಬ್ಬರೂ ಮೈಸೂರಿನಲ್ಲಿ ಭೇಟಿಯಾಗಿದ್ದು, ಭೇಟಿ ವೇಳೆ ದಾಳಿಗೆ ಸಂಚು ರೂಪಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ಗುಪ್ತಚರ ತಂಡವು ಪೂರ್ವಾನುಮತಿ ಇಲ್ಲದೆ ನಗರ ಬಿಟ್ಟು ಹೊರ ಹೋಗದಂತೆ ಹಾಗೂ ಎಲ್ಲಾ ಫೋನ್ ಕರೆಗಳನ್ನು ಸ್ವೀಕರಿಸುವಂತೆ ಮನೋರಂಜನ್ ಅವರ ಕುಟುಂಬ ಸದಸ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ವಿಜಯನಗರ ನಿವಾಸಿಯಾಗಿರುವ ಆರೋಪಿ ಮನೋರಂಜನ್ ಸಾಗರ ಶರ್ಮಾನನ್ನು ಮನೆಗೆ ಕರೆದುಕೊಂಡು ಹೋಗಿ ತನ್ನ ಸಹಪಾಠಿ ಎಂದು ಪರಿಚಯಿಸಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಮಹಜರು ನಡೆಸಲು ಇಬ್ಬರನ್ನೂ ಮೈಸೂರಿಗೆ ಕರೆ ತರಲಿದ್ದು, ಈ ವೇಳೆ  ಸಾಗರ್ ತಂಗಿದ್ದ ಹೋಟೆಲ್‌ಗೂ ಭೇಟಿ ಪರಿಶೀಲನೆ ನಡೆಸಲಿದ್ದಾರೆಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಬಿಜೆಪಿಯು ‘ವಿ ಸ್ಟ್ಯಾಂಡ್ ವಿತ್ ಪ್ರತಾಪ್ ಸಿಂಹ’ ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. ಬಿಜೆಪಿ ನಾಯಕ ವೈ ವಿ ರವಿಶಂಕರ್ ಅವರು ಮಾತನಾಡಿ, ಪಕ್ಷವು ಮನೋರಂಜನ್, 6 ಮಂದಿ ಆರೋಪಿಗಳೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

ತಮ್ಮ ಕ್ಷೇತ್ರದ ನಿವಾಸಿಯಾಗಿರುವುದರಿಂದ ಸಂದರ್ಶಕರ ಪಾಸ್'ನ್ನು ಪ್ರತಾಪ್ ಸಿಂಹ ಅವರು ನೀಡಿದ್ದಾರೆಂದು ತಿಳಿಸಿದ್ದಾರೆ.

ಕರ್ನಾಟಕ ದಲಿತ ಪ್ಯಾಂಥರ್ಸ್ ಮುಖಂಡ ಗಿರಿಯಣ್ಣ ಅವರು ಮಾತನಾಡಿ, ಸಂಸತ್ತಿನ ಭದ್ರತಾ ಲೋಪದ ಘಟನೆಯ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

SCROLL FOR NEXT