ರಾಜ್ಯ

ಸಿ.ಪಿ.ಯೋಗೇಶ್ವರ್ ಭಾವ ಕೊಲೆ ಪ್ರಕರಣ:ತಮಿಳುನಾಡಿನಲ್ಲಿ ಮೂವರು ಆರೋಪಿಗಳ ಬಂಧನ

Manjula VN

ಬೆಂಗಳೂರು: ಎಂಎಲ್‌ಸಿ ಸಿಪಿ ಯೋಗೀಶ್ವರ ಅವರ ಭಾವ ಪಿ ಮಹದೇವಯ್ಯ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ತಮಿಳುನಾಡು ಮೂಲದ ಮುರುಗೇಶ್(40) ಬಂಧಿತ ಆರೋಪಿ. ಈತ ತಮಿಳುನಾಡಿನ ಇನ್ನಿಬ್ಬರು ಸ್ನೇಹಿತರ ಸಹಕಾರದಿಂದ ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ.

ಮುರುಗೇಶ್, ಈ ಹಿಂದೆ ಯೋಗೇಶ್ವರ್ ಸಹೋದರ ಗಂಗಾಧರ್ ಅವರ ತೋಟದ ಕಾವಲುಗಾರನಾಗಿದ್ದ. ಮಹದೇವಯ್ಯನವರ ಮನೆ ಪಕ್ಕದ ತೋಟದಲ್ಲಿ ಪತ್ನಿ ಸಮೇತ ವಾಸವಾಗಿದ್ದ. ಆದರೆ, ಈತನನ್ನು ಕೆಲಸದಿಂದ ಇತ್ತೀಚೆಗೆ ತೆಗೆದುಹಾಕಲಾಗಿತ್ತು.

ಈ ಹಿಂದೆ ಇಲ್ಲಿ ಕೆಲಸ ಮಾಡುವಾಗ ಮುರುಗೇಶ್, ಮಹದೇವಯ್ಯನವರ ವಿಶ್ವಾಸ ಗಳಿಸಿದ್ದನು. ನಂತರ ಈತ ಮೀನು ಹಿಡಿಯುವ ಮೂಲಕ ಜೀವನ ಸಾಗಿಸುತ್ತಿದ್ದ. ಆಗಾಗ್ಗೆ ಮಹದೇವಯ್ಯ ಅವರಿಗೆ ಹುರಿದ ಮೀನುಗಳನ್ನು ಪೂರೈಸುತ್ತಿದ್ದ. ಈ ಮಧ್ಯೆ ಜಮೀನು ಮಾರಿರುವ ಹಿನ್ನೆಲೆಯಲ್ಲಿ ಮಹದೇವಯ್ಯನವರ ಬಳಿ ಅಪಾರ ಹಣವಿದೆ ಎಂಬ ಮಾಹಿತಿ ಈತನಿಗೆ ಸಿಕ್ಕಿತ್ತು. ಹೀಗಾಗಿ ಮಹದೇವಯ್ಯ ಅವರನ್ನು ಭೇಟಿಯಾಗಲು ಬಂದಾಗಲೆಲ್ಲಾ ಹತ್ಯೆಗೆ ಸಂಚು ರೂಪಿಸುತ್ತಿದ್ದ. ಅಂತಿಮವಾಗಿ ತಮಿಳುನಾಡಿನ ತನ್ನಿಬ್ಬರು ಸ್ನೇಹಿತರ ಸಹಕಾರದಿಂದ ಈ ಕೃತ್ಯ ಎಸಗಿದ್ದಾನೆ ಎನ್ನಲಾಗುತ್ತಿದೆ.

ಕೊಲೆ ಬಳಿಕ ಈತ ನಾಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಅನುಮಾನ ಉಂಟಾಗಿ, ಆತನ ಬೆನ್ನುಬಿದ್ದಿದ್ದರು.

ಡಿ.1ರಂದು ತಾಲೂಕಿನ ಚಕ್ಕೆರೆ ಬಳಿಯ ವಡ್ಡರದೊಡ್ಡಿ ತೋಟದ ಮನೆಯಿಂದ ಕಾರು ಸಮೇತ ಮಹದೇವಯ್ಯ ನಾಪತ್ತೆಯಾಗಿದ್ದು, ಈ ಸಂಬಂಧ ನಾಲ್ಕು ಪ್ರತ್ಯೇಕ ತಂಡಗಳ ರಚಿಸಿಕೊಂಡ ಪೊಲೀಸರು ಪ್ರಕರಣದ ಬೆನ್ನು ಹತ್ತಿದ್ದರು.

ಡಿ.3ರಂದು ರಾತ್ರಿ ರಾಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಮಹದೇವಯ್ಯ ಕಾರು ಪತ್ತೆಯಾಗಿ, ಅದೇ ಹಾದಿಯಲ್ಲಿ ತನಿಖೆ ಚುರುಕುಗೊಳಿಸಿದ ಪರಿಣಾಮ ಡಿ.4ರ ಮಧ್ಯಾಹ್ನ ರಾಮಾಪುರದಿಂದ ಕೌದಳ್ಳಿಗೆ ತೆರಳುವ ಕಾಡಿನಲ್ಲಿ ಮಹದೇವಯ್ಯ ಶವ ಪತ್ತೆಯಾಗಿತ್ತು.

ತೋಟದ ಮನೆಯಿಂದ ರಾಮಾಪುರವರೆಗಿನ ದಾರಿಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳು, ಕೊಲೆಯ ಹಿಂದಿರುವ ಕಾರಣಗಳನ್ನು ಕೆದಕುತ್ತಾ ಹೋದಂತೆ ಜಟಿಲವಾಗತೊಡಗಿತು. ಈ ಕೊಲೆ ಪ್ರಕರಣದ ಆರೋಪಿ ಅಂತಿಮವಾಗಿ ಮಹದೇವಯ್ಯನವರ ಉತ್ತರ ಕ್ರಿಯಾಧಿಗಳಂದು ಪತ್ತೆಯಾಗಿದ್ದು, ಆ ಮೂಲಕ ಇಲ್ಲಿಯವರೆಗೆ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದಂತಾಗಿದೆ.

ಆರೋಪಿ ಮೊಬೈಲ್ ಬಳಸದ ಕಾರಣ ಹಾಗೂ ಒಂದೇ ಕಡೆ ಇರದೆ ಆಗಾಗ್ಗೆ ಪ್ರಯಾಣಿಸುತ್ತಿದ್ದರಿಂದ ಆತನ ಬಂಧನಕ್ಕೆ ಪೊಲೀಸರು ಹರಸಾಹಸ ಪಡಬೇಕಾಗಿತ್ತು. ಈ ನಡುವೆ ಮೂವರ ಪೈಕಿ ಆರೋಪಿಯೊಬ್ಬನಿಗೆ ಹಾವು ಕಚ್ಚಿ ಆತ ಆಸ್ಪತ್ರೆಗೆ ದಾಖಲಾಗಿತ್ತು. ಈತನ ಮೂಲಕ ಪೊಲೀಸರಿಗೆ ಮಾಸ್ಟರ್ ಮೈಂಡ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಆಸ್ಪತ್ರೆಗೆಯಲ್ಲಿ ದಾಖಲಾಗಿದ್ದ ವ್ಯಕ್ತಿಯನ್ನು ಜೊತೆಗೆ ಹಾಕಿಕೊಂಡು ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಇದರಂತೆ ಆರೋಪಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.

SCROLL FOR NEXT