ರಾಜ್ಯ

ಹಾವೇರಿ: ಪ್ರೀತಿಸಿದವನೊಂದಿಗೆ ಓಡಿಹೋದ ಮಗಳು; ಯುವಕನ ಚಿಕ್ಕಪ್ಪನನ್ನು ಅರೆಬೆತ್ತಲೆಗೊಳಿಸಿ ಹಲ್ಲೆ

Ramyashree GN

ಹಾವೇರಿ: ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಬೆಳಗಾವಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮತ್ತು ಹಲ್ಲೆ ಪ್ರಕರಣವನ್ನು ನೆನಪಿಸುವ ಆತಂಕಕಾರಿ ಘಟನೆಯೊಂದು ಮಂಗಳವಾರ ಹಾವೇರಿ ಜಿಲ್ಲೆಯಲ್ಲಿ ವರದಿಯಾಗಿದೆ.

ತಮ್ಮ ಮಗಳು ಓಡಿಹೋಗಿದ್ದಕ್ಕೆ ಕೋಪಗೊಂಡ ಯುವತಿಯ ಪೋಷಕರು ಮತ್ತು ಸಂಬಂಧಿಕರು ಸೋಮವಾರ ರಾತ್ರಿ ಯುವಕನ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಮನೆಗೆ ನುಗ್ಗಿ ಯುವಕನ ಚಿಕ್ಕಪ್ಪನನ್ನು ಅಪಹರಿಸಿ, ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ರಾಣೆಬೆನ್ನೂರು ತಾಲೂಕಿನ ಮುದೇನೂರು ಗ್ರಾಮದಲ್ಲಿ ಘಟನೆ ನಡೆದಿದೆ.

ಚಳಗೇರಿ ಗ್ರಾಮದ ಸಂಗೀತಾ ಡಿಸೆಂಬರ್ 15ರಂದು ಮುದೇನೂರು ಗ್ರಾಮದ ಪ್ರಕಾಶ್ ಎಂಬುವವರ ಜತೆ ಓಡಿ ಹೋಗಿದ್ದರು. ಎರಡೂ ಕುಟುಂಬಗಳ ತೀವ್ರ ವಿರೋಧದ ನಡುವೆಯೂ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ.

ಪ್ರಕಾಶ್ ಅವರ ಪೋಷಕರು ಮತ್ತು ಸಂಬಂಧಿಕರು ಆತನಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಯುವತಿ ಮನೆಯವರು ಶಂಕಿಸಿದ್ದಾರೆ. ಹೀಗಾಗಿ, ಪ್ರಕಾಶ್ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. 

ಪ್ರಕಾಶ್ ಚಿಕ್ಕಪ್ಪ ಪ್ರಶಾಂತ್ ಅವರನ್ನು ತಮ್ಮ ವಾಹನದಲ್ಲಿ ರಾಣೇಬೆನ್ನೂರು ಪಟ್ಟಣಕ್ಕೆ ತಮ್ಮೊಂದಿಗೆ ಕರೆತಂದಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಪ್ರಶಾಂತ್ ಅವರ ಅಂಗಿಯನ್ನು ಬಿಚ್ಚಿ ಹಲವು ಬಾರಿ ಥಳಿಸಲಾಗಿದೆ. ಪೊಲೀಸ್ ಠಾಣೆ ಎದುರಲ್ಲೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಯುವಕನ ಮನೆಯವರು ರಾಣೆಬೆನ್ನೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಈ ಹಿಂದೆ ಎರಡು ಕುಟುಂಬಗಳು ಸಾಲದ ವಿಚಾರದಲ್ಲಿ ಜಗಳ ಮಾಡಿಕೊಂಡಿದ್ದವು ಎಂದು ಮೂಲಗಳು ತಿಳಿಸಿವೆ.

ದಂಪತಿ ಎಲ್ಲಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಯುವತಿ ಮನೆಯವರು ಹಲಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

SCROLL FOR NEXT