ರಾಜ್ಯ

ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಲಂಚ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

Lingaraj Badiger

ಬೆಂಗಳೂರು: ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಬಿಜೆಪಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ(ಕೆಎಸ್ ಡಿಎಲ್)  ಟೆಂಡರ್​ಗಾಗಿ ಲಂಚ ಪಡೆದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.

ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಮಾಡಾಳ್ ವಿರೂಪಾಕ್ಷಪ್ಪ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ, ಸ್ಪೀಕರ್ ಅನುಮತಿ ಪಡೆಯದೇ ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸಲಾಗಿದೆ ಎಂಬ ತಾಂತ್ರಿಕ ಕಾರಣದಿಂದ ಪ್ರಕರಣ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಮಾಡಾಳ್ ವಿರೂಪಾಕ್ಷಪ್ಪ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ಅವರು, ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್​ 17 A ಪ್ರಕಾರ ಪ್ರಕ್ರಿಯೆ ಪಾಲಿಸಿಲ್ಲ ಮತ್ತು  ತನಿಖೆಗೆ ಸ್ಪೀಕರ್ ಅನುಮತಿ ಪಡೆದಿಲ್ಲ ಎಂದು ಹೇಳಿದರು.

ಆರೋಪಿ ಪರ ವಕೀಲರ ವಾದ ಪುರಸ್ಕರಿಸಿದ ಹೈಕೋರ್ಟ್, ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಪ್ರಕರಣ ರದ್ದುಗೊಳಿಸಿದೆ.

ಮಾಡಾಳ್ ಅವರ ಪುತ್ರ ಕೆಎಎಸ್ ಅಧಿಕಾರಿ ಪ್ರಶಾಂತ್ ಮಾಡಾಳ್ ಅವರು ತಂದೆಯ ಪರವಾಗಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಬಳಿಕ ಶಾಸಕರ ಕಚೇರಿ ಮತ್ತು ಮನೆಯಲ್ಲಿ 8 ಕೋಟಿ ರೂಪಾಯಿ ಹೆಚ್ಚು ನಗದು ಪತ್ತೆಯಾಗಿತ್ತು. ಇದರಿಂದ ಅಧಿಕಾರದಲ್ಲಿದ್ದ ಬಿಜೆಪಿಗೆ ಭಾರೀ ಮುಖಭಂಗವಾಗಿತ್ತು. 

SCROLL FOR NEXT