ರಾಜ್ಯ

ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರದ ಸಾಧನೆ-ಯೋಜನೆಗಳ ಪ್ರಚಾರಕ್ಕೆ ಒಪ್ಪಂದ; ಪಾರದರ್ಶಕತೆ ಮಾಯ ಎಂದ ಅರವಿಂದ್ ಬೆಲ್ಲದ್

Ramyashree GN

ಬೆಂಗಳೂರು: 'ಏನಾದರೂ ಹಗರಣ ನಡೆಯುತ್ತಿದೆಯೇ? ಪಾರದರ್ಶಕತೆ ಇಲ್ಲದೆ ಹಣ ಮಂಜೂರು ಮಾಡುವ ಹೊಣೆಗಾರಿಕೆಯಿಂದ ಸರ್ಕಾರ ನುಣುಚಿಕೊಳ್ಳುತ್ತಿರುವುದು ಏಕೆ' ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಪ್ರಶ್ನಿಸಿದರು.

ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರವನ್ನು ಪ್ರತಿನಿಧಿಸುವ ಬೆಲ್ಲದ್, ಕಾಂಗ್ರೆಸ್ ಸರ್ಕಾರವು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಸಾಧನೆಗಳು ಮತ್ತು ಯೋಜನೆಗಳನ್ನು ಪ್ರಚಾರ ಮಾಡಲು ಪಾಲಿಸಿ ಫ್ರಂಟ್ ಎಂಬ ಸಂಘಟನೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಮತ್ತು ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಆರೋಪಿಸಿದರು.

'7 ಕೋಟಿ ರೂ. ಗೂ ಮೀರಿದ ಯಾವುದೇ ಒಪ್ಪಂದ ಮಾಡಿಕೊಳ್ಳುವಾಗ ಪಾರದರ್ಶಕತೆಗೆ ಸಂಬಂಧಿಸಿದ ಕೆಲವು ಮಾನದಂಡಗಳನ್ನು ಅನುಸರಿಸಬೇಕಾಗಿರುತ್ತದೆ. ಆದರೆ, ಸರ್ಕಾರ ಯಾವುದೇ ನಿಯಮಗಳನ್ನು ಅನುಸರಿಸಿಲ್ಲ. ಪಾರದರ್ಶಕವಾಗಿ ಮಾಹಿತಿ ಬಹಿರಂಗಪಡಿಸದೆ ಗುತ್ತಿಗೆ ನೀಡಲಾಗಿದೆ. ಆರ್‌ಟಿಐ ಮೂಲಕ ಇದನ್ನು ಬಯಲಿಗೆಳೆದಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಕಾನೂನಿನ ಪ್ರಕಾರ ಪ್ರತಿಕ್ರಿಯಿಸಲಿಲ್ಲ. ಪಾರದರ್ಶಕತೆಯ ಕೊರತೆಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ' ಎಂದರು.

ಮೂಲಗಳ ಪ್ರಕಾರ, ಮಾಹಿತಿ ಮತ್ತು ಪ್ರಚಾರ ಸಚಿವಾಲಯವು ದಿ ಪಾಲಿಸಿ ಫ್ರಂಟ್‌ಗೆ ನೀಡಲಾದ ಒಪ್ಪಂದದಂತೆ ಆರಂಭದಲ್ಲಿ 36 ತಿಂಗಳಿಗೆ ಮಾಸಿಕ 99 ಲಕ್ಷ ರೂ. ದರದಲ್ಲಿತ್ತು. ನಂತರ, ಒಪ್ಪಂದಕ್ಕೆ ಮಾರ್ಪಾಡು ಮಾಡಲಾಯಿತು. 12 ತಿಂಗಳ ಅವಧಿಗೆ ಮಾಸಿಕ 60 ಲಕ್ಷ ರೂ. ಪಾವತಿಗೆ ಇಳಿಸಲಾಯಿತು. ಈ ಮಾರ್ಪಾಡು ವಾರ್ಷಿಕ 7.2 ಕೋಟಿ (72 ಮಿಲಿಯನ್ ರೂಪಾಯಿ) ಮೊತ್ತಕ್ಕೆ ಕಾರಣವಾಯಿತು.

ಆರ್‌ಟಿಐ ನಲ್ಲಿ ಅರ್ಜಿ ಸಲ್ಲಿಸಿದ ವ್ಯಕ್ತಿಯನ್ನು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಂಪರ್ಕಿಸಿದ್ದು, ಅವರು ತಾವು ಬಯಸಿದ ಮಾಹಿತಿಯನ್ನು ಸರ್ಕಾರ ನೀಡಿಲ್ಲ ಎಂದು ಹೇಳಿದರು. ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಯಾರೋ ಮಾಹಿತಿಯನ್ನು ತಡೆಹಿಡಿಯುತ್ತಿದ್ದಾರೆ ಎಂದು ಅವರು ಹೇಳಿದರು.

ಮೂಲಗಳ ಪ್ರಕಾರ, 'ಸದ್ಯ ಮಾಹಿತಿ ಸಚಿವರ ಗೈರುಹಾಜರಿಯಿಂದ ಖಾತೆಯನ್ನು ಕೆಲವು ಪ್ರಬಲ ವ್ಯಕ್ತಿಗಳು ನಡೆಸುತ್ತಿದ್ದಾರೆ ಎಂಬುದು ಹಲವಾರು ಪ್ರಕರಣಗಳಲ್ಲಿ ಸಾಬೀತಾಗಿದೆ. ಈ ಬಗ್ಗೆ ತನಿಖೆಯಾಗಬೇಕು' ಎಂದು ಒತ್ತಾಯಿಸಿದರು.

SCROLL FOR NEXT