ರಾಜ್ಯ

ಚಿತ್ತಾಪುರ: ಹೊಲಗಳಲ್ಲಿ ಹತ್ತಿ ಬಿಡಿಸುತ್ತಿದ್ದ ಅಪ್ರಾಪ್ತ ವಯಸ್ಸಿನ ಏಳು ಹೆಣ್ಣು ಮಕ್ಕಳ ರಕ್ಷಣೆ

Nagaraja AB

ಕಲಬುರಗಿ: ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಜಾರಿಗಾಗಿ ಹೋರಾಟ ನಡೆಸುತ್ತಿರುವ ಸ್ವಯಂಸೇವಾ ಸಂಸ್ಥೆಗಳು ಸೇರಿದಂತೆ ಬಾಲಕಾರ್ಮಿಕ ನಿಷೇಧದ ವಿವಿಧ ಘಟಕಗಳು ಚಿತ್ತಾಪುರ ತಾಲೂಕಿನ ಕೆಲವು ಗ್ರಾಮಗಳಲ್ಲಿ ಹತ್ತಿ ಹೊಲಗಳಲ್ಲಿ ದುಡಿಯುತ್ತಿದ್ದ 7 ಬಾಲಕಿಯರನ್ನು ರಕ್ಷಿಸಲಾಗಿದೆ. 

ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ನಿಷೇಧ ಸೊಸೈಟಿ, ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕ, ಪಂಚಾಯತ್ ರಾಜ್ ಸಿಬ್ಬಂದಿಗಳನ್ನು ಒಳಗೊಂಡ ತಂಡ ಮಕ್ಕಳ ಸಹಾಯವಾಣಿಗೆ ನೀಡಿದ ದೂರಿನ ಆಧಾರದ ಮೇಲೆ ಲಾಡ್ಲಾಪುರ, ನಾಲವಾರ, ಸನ್ನತಿ ರಸ್ತೆಯ ಹತ್ತಿ ಹೊಲಗಳಲ್ಲಿ ಕಾರ್ಯಾಚರಣೆ ನಡೆಸಿ, ಕೆಲಸ ಮಾಡುತ್ತಿದ್ದ 7 ಬಾಲಕಿಯರನ್ನು ರಕ್ಷಿಸಿ ತಾತ್ಕಾಲಿಕವಾಗಿ ಬಾಲಕಿಯರ ರಿಮಾಂಡ್ ಹೋಮ್‌ಗೆ ದಾಖಲಿಸಲಾಗಿದೆ ಎಂದು ಸಹಾಯಕ ಕಾರ್ಮಿಕ ಆಯುಕ್ತ ಡಾ.ಅವಿನಾಶ್ ನಾಯ್ಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಈ ಬಾಲಕಿಯರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ಬಾಲಕಿಯರ ವಯಸ್ಸಿಗೆ ಸಂಬಂಧಿಸಿದ ದಾಖಲೆ ಪಡೆದುಕೊಂಡು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಹೆಣ್ಣು ಕೂಲಿ ಕಾರ್ಮಿಕರನ್ನು ಹತ್ತಿ ಹೊಲಗಳಲ್ಲಿ ದುಡಿಯಲು ಬಳಸಿಕೊಳ್ಳುವ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಅವರು ತಿಳಿಸಿದರು. 

ಬಾಲಕಾರ್ಮಿಕ ರಕ್ಷಣಾ ಸಮಿತಿಯ ಸಂಚಾಲಕ ಸಂತೋಷ ಕುಲಕರ್ಣಿ, ಲಾಡ್ಲಾಪುರ ಗ್ರಾ.ಪಂ.ಪಿಡಿಒ ಗೋಪಾಲ ಕಟ್ಟಿಮನಿ, ಜಿಲ್ಲಾಧಿಕಾರಿ ಕಚೇರಿಯ ಹಿರಿಯ ಆರ್‌ಟಿಒ ಎಚ್‌.ಸಾಯಿ ಧರ್ಮಿಂದರ್‌, ಸಂಸ್ಕಾರ ಪ್ರತಿಷ್ಠಾನದ ನಿರ್ದೇಶಕ ವಿಠಲ ಚಿಕಣಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

SCROLL FOR NEXT