ರಾಜ್ಯ

ನಿಗಮ-ಮಂಡಳಿ ನೇಮಕಾತಿ ಯಾವುದೇ ಕ್ಷಣದಲ್ಲಾದರೂ ಆಗಬಹುದು: ಡಿಕೆ.ಶಿವಕುಮಾರ್

Manjula VN

ಬೆಂಗಳೂರು: ಪಕ್ಷದ ಹೈಕಮಾಂಡ್ ಸೂಚಿಸಿದಂತೆ ಮಂಡಳಿ, ನಿಗಮಗಳಿಗೆ ಶೀಘ್ರವೇ ನೇಮಕಾತಿ ನಡೆಯಲಿದ್ದು, ಶಾಸಕರ ಜೊತೆಗೆ ಪಕ್ಷದ ಕಾರ್ಯಕರ್ತರ ಹೆಸರನ್ನೂ ಪರಿಗಣಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೋಮವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ಹಾಗೂ ಪಕ್ಷದ ಕಾರ್ಯಕರ್ತರ 40-50 ಹೆಸರುಗಳ ಪಟ್ಟಿ ಅಂತಿಮಗೊಂಡಿದೆ. ಯಾವುದೇ ಕ್ಷಣದಲ್ಲಾದರೂ ನೇಮಕಾತಿ ನಡೆಯಬಹುದು ಎಂದು ಹೇಳಿದರು.

ಪ್ರಸ್ತುತ ಬೆಂಗಳೂರಿನಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಪಟ್ಟಿಗೆ ಒಪ್ಪಿಗೆ ನೀಡುವ ಸಾಧ್ಯತೆಯಿದ್ದು ನಂತರ ಪಟ್ಟಿಯನ್ನು ಸಾರ್ವಜನಿಕಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇ ರಾಷ್ಟ್ರ ರಾಜಧಾನಿ ನವದೆಹಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಹೈಕಮಾಂಡ್ ಜೊತೆಗೆ ಸರಣಿ ಸಭೆಗಳನ್ನು ನಡೆಸಿದ್ದರು.

ಪಟ್ಟಿಯನ್ನು ಸಿದ್ಧಪಡಿಸಿದ ನಂತರವೂ, ಪಕ್ಷದ ವರಿಷ್ಠರು, ವಿಶೇಷವಾಗಿ ರಾಹುಲ್ ಗಾಂಧಿ ಅವರು, ಶಾಸಕರು ಮತ್ತು ಎಂಎಲ್‌ಸಿಗಳನ್ನು ಮಾತ್ರ ಹುದ್ದೆಗಳಿಗೆ ಪರಿಗಣಿಸಿದ್ದರಿಂದ ಪಟ್ಟಿಗೆ ಒಪ್ಪಿಗೆ ನೀಡಿರಲಿಲ್ಲ ಎಂದು ತಿಳಿದುಬಂದಿದೆ.

ವಾಸ್ತವವಾಗಿ, ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ.ಶಿವಕುಮಾರ್ ಅವರೇ, ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು ಎಂದು ಹೈಕಮಾಂಡ್‌ಗೆ ತಿಳಿಸಿದ್ದು, "ಇದರ ಪರಿಣಾಮವಾಗಿ, ಪಕ್ಷದ ವರಿಷ್ಠರು ನಿಗಮ-ಮಂಡಳಿ ನೇಮಕಾತಿ ವಿಚಾರವನ್ನು ಮುಂದೂಡಿದ್ದರು ಎಂದು ಮೂಲಗಳು ತಿಳಿಸಿವೆ.

SCROLL FOR NEXT