ಬೆಂಗಳೂರು: ಕೋವಿಡ್-19 ಮತ್ತು ಜೆಎನ್.1 ಉಪತಳಿ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಯನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ.
ಈ ಪಿಐಎಲ್ ಅನ್ನು ಹಿರಿಯ ವಕೀಲ ಎನ್.ಪಿ. ಅಮೃತೇಶ್ ಸಲ್ಲಿಸಿದ್ದರು.
ನ್ಯಾಯಮೂರ್ತಿಗಳಾದ ಆರ್. ನಟರಾಜ್ ಮತ್ತು ಕೆವಿ ಅರವಿಂದ್ ಅವರಿದ್ದ ವಿಭಾಗೀಯ ಪೀಠ ಹೊಸ ವರ್ಷಾಚರಣೆಗೆ ನಿಷೇಧ ಹೇರಲು ನಿರಾಕರಿಸಿದರು ಮತ್ತು ನಿಷೇಧ ಹೇರಿದರೆ ಜನರು ಬೆಂಗಳೂರಿನಿಂದ ಹೊರಗೆ ಹೋಗುತ್ತಾರೆ ಎಂದು ಅಭಿಪ್ರಾಯಪಟ್ಟರು.
ಈ ನಿಟ್ಟಿನಲ್ಲಿ ಸರ್ಕಾರ ಯಾವುದೇ ಮಾರ್ಗಸೂಚಿ ಮತ್ತು ನಿರ್ಬಂಧಗಳನ್ನು ಹೊರಡಿಸಿಲ್ಲ. ಸದ್ಯಕ್ಕೆ ಕೋವಿಡ್-19 ಬಗ್ಗೆ ಭಯಪಡುವಂತಹ ಯಾವುದೇ ಪರಿಸ್ಥಿತಿ ಇಲ್ಲ.
ಪ್ರಕರಣವನ್ನು ಜನವರಿಗೆ ಮುಂದೂಡಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ 103 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದ್ದು, ಒಬ್ಬರು ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ: ಹೊಸ ವರ್ಷ: ನಗರದಲ್ಲಿ ಖಾಕಿ ಕಟ್ಟೆಚ್ಚರ, ಮಧ್ಯರಾತ್ರಿ 1 ಗಂಟೆವರೆಗೆ ಸಂಭ್ರಮಾಚರಣೆಗೆ ಅವಕಾಶ; ಮಾರ್ಗಸೂಚಿ ಬಿಡುಗಡೆ
ಕೋವಿಡ್ ಪಾಸಿಟಿವಿಟಿ ದರವು ಶೇ 1.41 ರಷ್ಟಿದೆ. 19 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ 80 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ನಗರದಲ್ಲಿ 380 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ 34 ಜೆಎನ್.1 ಪ್ರಕರಣಗಳಿದ್ದು, ಬೆಂಗಳೂರಿನಲ್ಲಿ 20 ಜೆಎನ್.1 ಪ್ರಕರಣಗಳು ದಾಖಲಾಗಿವೆ.