ರಾಜ್ಯ

ಭಾರಿ ಟ್ರಾಫಿಕ್‌ ಬಳ್ಳಾರಿ ರಸ್ತೆ ಕಾಮಗಾರಿ ವಿಳಂಬಕ್ಕೆ ಕಾರಣವಾಗಬಾರದು: ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್ 

Ramyashree GN

ಬೆಂಗಳೂರು: ಬೆಂಗಳೂರು ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯ ಮೇಕ್ರಿ ವೃತ್ತದಿಂದ ಕಾವೇರಿ ಜಂಕ್ಷನ್‌ವರೆಗೆ ರಸ್ತೆ ವಿಸ್ತರಣೆ ಕಾಮಗಾರಿಗೆ ಹೆಚ್ಚಿನ ವಿಳಂಬ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಅನುಮತಿ ನೀಡಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಬಳ್ಳಾರಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ಬಿಬಿಎಂಪಿಯ ಹಿರಿಯ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ನಡೆಸಬೇಕು.

ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಈ ಅಂಶವನ್ನು ಖುದ್ದಾಗಿ ಪರಿಶೀಲಿಸುತ್ತಾರೆ. ಕೆಲವು ಅಸಮರ್ಥನೀಯ ಕಾರಣ ಅಥವಾ ಕ್ಷಮೆಯಿಂದ ರಸ್ತೆ ವಿಸ್ತರಣೆ ಕಾಮಗಾರಿ ವಿಳಂಬವಾಗದಂತೆ ಸೂಕ್ತ ಕಾಳಜಿ ವಹಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೈಕೋರ್ಟ್ ಸೂಚಿಸಿದೆ. 

ಬಳ್ಳಾರಿ ರಸ್ತೆ ಅಗಲೀಕರಣ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಮರ್ಪಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.

ಭಾರಿ ಟ್ರಾಫಿಕ್

ಸಂಚಾರ ದಟ್ಟಣೆಯಂತಹ ಕೆಲವು ತೊಂದರೆಗಳಿಂದಾಗಿ ರಸ್ತೆ ವಿಸ್ತರಣೆಗೆ ಒಂಬತ್ತು ತಿಂಗಳು ವಿಳಂಬವಾಗುವ ಸಾಧ್ಯತೆಯಿದೆ. ಆದರೆ, ಈ ವಿಳಂಬವು ಉದ್ದೇಶಪೂರ್ವಕವಲ್ಲ ಮತ್ತು ಪ್ರಾಮಾಣಿಕವಾಗಿದೆ ಎಂದು ಬಿಬಿಎಂಪಿ ಸಲ್ಲಿಸಿದ್ದ ವರದಿಯನ್ನು ಪರಿಶೀಲಿಸಿದ ನ್ಯಾಯಾಲಯವು ಆದೇಶ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ. ಈ ರಸ್ತೆ ವಿಸ್ತರಣೆ ಮಾಡುವಂತೆ ಸುಪ್ರೀಂಕೋರ್ಟ್ ಕೋರ್ಟ್​ ನಿರ್ದೇಶನವಿದೆ. ಆದರೂ, ಬಿಬಿಎಂಪಿ ಕಾಮಗಾರಿಗೆ ವಿಳಂಬ ಮಾಡುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ವಕೀಲರು, ಈಗಾಗಲೇ ಕಾಮಗಾರಿ ಪ್ರಾರಂಭವಾಗಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ. ಹೀಗಾಗಿ ಕಾಮಗಾರಿ ವಿಳಂಬವಾಗುತ್ತಿದೆ ಎಂದು ವಿವರಿಸಿದರು.

ಕಾಮಗಾರಿ ಪ್ರಗತಿಯಲ್ಲಿದೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಬಹುದಾದರೂ, ಅದೇ ಸಮಯದಲ್ಲಿ, ರಸ್ತೆಯಲ್ಲಿನ ಭಾರಿ ದಟ್ಟಣೆಯನ್ನು ಮುಂದಿಟ್ಟುಕೊಂಡು ವಾಸ್ತವವನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಗಮನಿಸಿದೆ.

ರಸ್ತೆ ವಿಸ್ತರಣೆ ಕಾಮಗಾರಿಯು ಸೂಕ್ತವಾದ ವೇಗ ಪಡೆಯುವುದನ್ನು ಗಮನಿಸಲು ಬಿಬಿಎಂಪಿ ವಿವಿಧ ವಿಧಾನಗಳು ಮತ್ತು ಮಾರ್ಗಗಳನ್ನು ಅನ್ವೇಷಿಸಬಹುದು. ರಸ್ತೆ ಅಗಲೀಕರಣ ಕಾಮಗಾರಿಯನ್ನು ಪಾಲಿಕೆಯ ವಿಶ್ವಾಸಾರ್ಹ ಹಿರಿಯ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಬೇಕು. ಆ ಅಧಿಕಾರಿಗಳು ಕಾಲಕಾಲಕ್ಕೆ ಪರಿಶೀಲನೆ ನಡೆಸುತ್ತ, ಕಾಮಗಾರಿ ವಿಳಂಬವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿತಲ್ಲದೆ, ಮುಂದಿನ ನಾಲ್ಕು ವಾರಗಳಲ್ಲಿ ಕಾಮಗಾರಿಯ ಪ್ರಗತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಪಾಲಿಕೆಗೆ ನಿರ್ದೇಶಿಸಿತು.

SCROLL FOR NEXT