ರಾಜ್ಯ

‘ತುಳು ಭಾಷೆ' ಅಧ್ಯಯನಕ್ಕೆ ಸರ್ಕಾರ ಸಮಿತಿ ರಚಿಸುತ್ತಿರುವುದೇಕೆ?: ಯುಟಿ ಖಾದರ್ ಪ್ರಶ್ನೆ

Manjula VN

ಮಂಗಳೂರು: ತುಳುವನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಕುರಿತು ಸರ್ಕಾರ ಸಮಿತಿ ರಚನೆಗೆ ಮುಂದಾಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು ಟಿ ಖಾದರ್ ಅವರು ಸೋಮವಾರ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಅಧ್ಯಯನಕ್ಕೆ ಸಮಿತಿ ರಚಿಸುವ ಅಗತ್ಯ ಏನಿತ್ತು? ಸಮಿತಿ ರಚಿಸುವ ಬದಲು ರಾಜ್ಯದಲ್ಲಿ ತುಳುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಬಗ್ಗೆ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಿತ್ತು,’’ ಎಂದು ಹೇಳಿದರು.

2500 ವರ್ಷಗಳ ಇತಿಹಾಸವಿರುವ ತುಳು ಅಧ್ಯಯನಕ್ಕೆ ಸಮಿತಿ ರಚಿಸುವ ಅಗತ್ಯವಿರಲಿಲ್ಲ, ಇದು ಜನರಿಗೆ ಮೋಸ ಮಾಡುವ ತಂತ್ರ. ಬಿಜೆಪಿ ಶಾಸಕರು ತುಳುನಾಡಿನ ಜನರಿಗೆ ಮೋಸ ಮಾಡಿದ್ದಾರೆ. ಕರಾವಳಿಯಲ್ಲಿ ಬಿಜೆಪಿ ಶಾಸಕರು ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾದರೂ ಎರಡನೇ ರಾಜ್ಯ ಭಾಷೆಯನ್ನಾಗಿ ಮಾಡಲಿಲ್ಲ. ಈಗ ಚುನಾವಣೆ ಹತ್ತಿರ ಬರೋವಾಗ ಜನರ ಆಕ್ರೋಶ ತಪ್ಪಿಸಲು ಮೋಸ ಮಾಡುತ್ತಿದ್ದಾರೆ. ಸರ್ಕಾರ ಅಧ್ಯಯನ ಸಮಿತಿ ಮಾಡಿರೋದೇ ತುಳು ಭಾಷೆಗೆ ಮಾಡಿರುವ ಅವಮಾನ ಎಂದು ತಿಳಿಸಿದರು.

ತುಳುವಿನಲ್ಲಿ ಯಕ್ಷಗಾನ ಮತ್ತು ಲಿಪಿಯ ಬಗ್ಗೆ ಅಕಾಡೆಮಿ ಇದೆ. ಇದನ್ನು ಶಾಲೆ ಮತ್ತು ಕಾಲೇಜುಗಳಲ್ಲಿ ಐಚ್ಛಿಕ ವಿಷಯವಾಗಿ ಕಲಿಸಲಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಸಮಿತಿಯನ್ನು ರಚಿಸುವ ಅಗತ್ಯ ಏನಿತ್ತು? ಎಂದು ಪ್ರಶ್ನಸಿದರು.

ರಾಜ್ಯ ಸರಕಾರ ಅಬ್ಬಕ್ಕ ಉತ್ಸವಕ್ಕೆ ನೀಡುತ್ತಿದ್ದ ಅನುದಾನವನ್ನು 50 ಲಕ್ಷ ರೂ.ಗೆ ಬದಲಾಗಿ 10 ಲಕ್ಷಕ್ಕೆ ಇಳಿಸಿದೆ 2008ರಲ್ಲಿ ಅಬ್ಬಕ್ಕ ಉತ್ಸವ ಆಯೋಜಿಸಲು 25 ಲಕ್ಷ ರೂಪಾಯಿ ಮಂಜೂರಾಗಿದ್ದು, ನಂತರ ಅದನ್ನು 50 ಲಕ್ಷಕ್ಕೆ ಹೆಚ್ಚಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವರು ಈ ವರ್ಷ ಕೇವಲ 10 ಲಕ್ಷ ರೂ ನೀಡಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

ಈ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಅಬ್ಬಕ್ಕ ಉತ್ಸವ ಆಯೋಜಿಸಲು ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಪತ್ರ ಬರೆಯುತ್ತೇನೆಂದು ತಿಳಿಸಿದರು.

ಇದೇ ವೇಳೆ ಫೆ.11 ರಂದು ಮಂಗಳೂರಿನಲ್ಲಿ ಅಮಿತ್ ಶಾ ರೋಡ್ ಶೋ ಹಮ್ಮಿಕೊಂಡಿರುವ ಬಗ್ಗೆ ವ್ಯಂಗ್ಯವಾಡಿದ ಖಾದರ್, ಅಮಿತ್ ಶಾ ಕರಾವಳಿಗೆ ಬರುವುದಕ್ಕೆ ಸ್ವಾಗತ ಮಾಡುತ್ತೇನೆ.‌ ಆದರೆ, ಅವರನ್ನು ಬೆಂಗಳೂರಿನಿಂದ ರಸ್ತೆ ಮಾರ್ಗದ ಮೂಲಕ ಮಂಗಳೂರಿಗೆ ಕರೆ ತರಲಿ. ಘಾಟಿ ರಸ್ತೆಯಲ್ಲಿ ರೋಡ್ ಶೋ ಮಾಡಿ ರಸ್ತೆಯ ಹೊಂಡ-ಗುಂಡಿಗಳ‌ನ್ನು ಲೆಕ್ಕ ಮಾಡಲಿ.‌ ಅಲ್ಲಿಂದ ಗೃಹ ಸಚಿವರನ್ನು ಕರೆತಂದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸೆಲ್ಯೂಟ್ ಹೊಡೆಯುತ್ತೇನೆ ಎಂದು ಸವಾಲು ಹಾಕಿದರು.

SCROLL FOR NEXT