ರಾಜ್ಯ

ಪ್ರಹ್ಲಾದ್ ಜೋಶಿ ಕಚೇರಿಯಲ್ಲಿ ಲಂಚ ಸ್ವೀಕಾರ ಆರೋಪ ಮಾಡಿದ ಜೆಡಿಎಸ್: ಮಾನನಷ್ಟ ಮೊಕದ್ದಮೆ ಹೂಡುವೆ ಎಂದ ಕೇಂದ್ರ ಸಚಿವ

Manjula VN

ಬೆಂಗಳೂರು: ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಜೆಡಿಎಸ್ ಮಂಗಳವಾರ ಆರೋಪಿಸಿದ್ದು, ಈ ಸಂಬಂಧ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ಎಂಎಲ್ ಸಿ ಎಸ್ಎಲ್,ಭೋಜೇಗೌಡ ಅವರು,  ಕೇಂದ್ರ ಸರ್ಕಾರದ ಅಧೀನದಲ್ಲಿರುವ ಎನ್ಎಂಸಿ ಸದಸ್ಯರನ್ನಾಗಿ ನೇಮಿಸಲು ಶಿವಮೊಗ್ಗದ ವೈದ್ಯರೊಬ್ಬರಿಂದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಕಚೇರಿಯಲ್ಲಿ ಲಂಚ ಪಡೆಯಲಾಗಿದೆ. ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಹರೀಶ್ ಅಯ್ಯಣ್ಣ ಎಂಬುವವರನ್ನು ಎನ್ಎಂಸಿ ಸದಸ್ಯರನ್ನಾಗಿ ನೇಮಿಸುವುದಕ್ಕಾಗಿ ಪ್ರಲ್ಹಾದ ಜೋಶಿಯವರ ಕಚೇರಿಯ ಸಿಬ್ಬಂದಿಗೆ 2.5 ಕೋಟಿ ಲಂಚ ನೀಡಿದ್ದಾರೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಉಪಸ್ಥಿತರಿದ್ದರು.

ಎರಡು ಬಾರಿ ನಿರ್ದಿಷ್ಟ ಬ್ಯಾಂಕ್ ಖಾತೆಗೆ 2.5 ಕೋಟಿ ರೂ. ವರ್ಗಾವಣೆಯಾಗಿದ್ದು, 2021ರ ಜುಲೈನಲ್ಲಿ 2 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ. ಉಳಿದ 50 ಲಕ್ಷ ರೂ. ನಗದು ರೂಪದಲ್ಲಿ ನೀಡಲಾಗಿದೆ. ಹಣ ವರ್ಗಾವಣೆ, ಶಿಫಾರಸು ಪತ್ರ, ಹಣ ಯಾರಿಗೆ ಸಿಕ್ಕಿದೆ ಎಂಬುದಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಯಬೇಕಿದೆ ಎಂದು ಒತ್ತಾಯಿಸಿದರು.

ಇದೇ ವೇಳೆ ಹರೀಶ್ ಅಯ್ಯಣ್ಣ ಅವರನ್ನು ಎನ್ಎಂಸಿ ಸದಸ್ಯರನ್ನಾಗಿ ನೇಮಕ ಮಾಡಬೇಕೆಂಬ ಕೋರಿಕೆಯನ್ನು ಪರಿಗಣಿಸುವುದಾಗಿ ಆಗ ಕೇಂದ್ರ ಆರೋಗ್ಯ ಸಚಿವರಾಗಿದ್ದ ಡಾ. ಹರ್ಷವರ್ಧನ್ ಅವರು ಪ್ರಲ್ಹಾದ ಜೋಶಿಯವರಿಗೆ ಪತ್ರವನ್ನೂ ಬರೆದಿದ್ದರು ಎಂದು ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಕೇಂದ್ರ ಸಚಿವರ ಪತ್ರಗಳನ್ನು ತೋರಿಸಿದರು.

ಅಕ್ರಮಗಳಿಗೆ ಸಂಬಂಧಿಸಿದ ಹಲವಾರು ದಾಖಲೆಗಳು ಇನ್ನೂ ನನ್ನ ಬಳಿ ಇವೆ, ಅದನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆಂದು ಹೇಳಿದರು.

ಈ ಆರೋಪವನ್ನು ಪ್ರಹ್ಲಾದ್ ಜೋಶಿಯವರು ತಳ್ಳಿಹಾಕಿದ್ದಾರೆ, ಈ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಸಾರ್ವಜನಿಕರನ್ನು ದಾರಿ ತಪ್ಪಿಸಲಾಗುತ್ತಿದೆ. ಮೊದಲನೆಯದಾಗಿ, ಈ ಪತ್ರವನ್ನು ವೈದ್ಯರಿಗೆ ಬರೆಯಲಾಗಿದೆ ಮತ್ತು ನಾನು ಖಂಡಿತವಾಗಿಯೂ ವೈದ್ಯನಲ್ಲ. ನನ್ನ ಕಚೇರಿಯಲ್ಲಿ ಅಂತಹ ಉದ್ಯೋಗಿ ಇಲ್ಲ. ನಿಮಗೆ ತುಂಬಾ ವಿಶ್ವಾಸವಿದ್ದರೆ, ಈ ಪತ್ರದ ಹೆಸರು ಮತ್ತು ವಿಷಯವನ್ನು ಏಕೆ ಮಸುಕುಗೊಳಿಸಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

"ತಳ ಬುಡವಿಲ್ಲದ ಹಾಗೂ ಜನರನ್ನು ದಾರಿ ತಪ್ಪಿಸುವ ಆಪಾದನೆ ಇದು. ಮೊದಲನೆಯದಾಗಿ ಆ ಪತ್ರ ವೈದ್ಯರೊಬ್ಬರಿಗೆ ಬರೆಯಲಾಗಿದೆ, ಖಂಡಿತವಾಗಿಯೂ ಅದು ನಾನಂತೂ ಅಲ್ಲ. ಅವರು ಹೇಳಿರುವ ಹೆಸರಿನ ಉದ್ಯೋಗಿ ನಮ್ಮ ಕಚೇರಿಯಲ್ಲೇ ಇಲ್ಲ. ಈ ತರಹದ ಆಧಾರರಹಿತ ಆಪಾದನೆಯನ್ನು ನಾನು ಗಂಭೀರವಾಗಿ ಪರಿಗಣಿಸುತ್ತೇನೆ. ಇದು ನನ್ನ ತೇಜೋವಧೆ ಮಾಡುವ ಹುನ್ನಾರವಾಗಿದ್ದು, ಮಾನ ನಷ್ಟ ಮೊಕದ್ದಮೆ ದಾಖಲಿಸುವ ಬಗ್ಗೆ ನಾನು ಯೋಚಿಸುತ್ತಿದ್ದೇನೆ" ಎಂದು ತಿಳಿಸಿದ್ದಾರೆ.

ಬಿಜೆಪಿಯ ಹಿರಿಯ ನಾಯಕ ಮತ್ತು ಎಂಎಲ್‌ಸಿ ಚಲುವಾದಿ ನಾರಾಯಣಸ್ವಾಮಿ ಮಾತನಾಡಿ, ಪಂಚರತ್ನ ರಥ ಯಾತ್ರೆಯನ್ನು ಟೀಕಿಸಿದ ನಂತರ ಜೆಡಿಎಸ್ ನಾಯಕರು ಪ್ರಹ್ಲಾದ್ ಜೋಶಿ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಇದು ಜೆಡಿಎಸ್ ನಾಯಕರ ಅಪ್ರಬುದ್ಧತೆಯನ್ನು ತೋರಿಸುತ್ತದೆ ಎಂದಿದ್ದಾರೆ.

SCROLL FOR NEXT