ರಾಜ್ಯ

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರಿಡಲು ಕೇಂದ್ರಕ್ಕೆ ಶಿಫಾರಸು: ಸಿಎಂ ಬೊಮ್ಮಾಯಿ

Lingaraj Badiger

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸೋಗಾನೆ ಗ್ರಾಮದಲ್ಲಿ ನಿರ್ಮಾಣವಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಹೆಸರಿಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಹೇಳಿದ್ದಾರೆ.

ಇಂದು ನಗರದ ಎನ್‌ಇಎಸ್‌ ಮೈದಾನದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಸಿಎಂ, ಶಿವಮೊಗ್ಗ ಅಭಿವೃದ್ಧಿಗೆ ಯಡಿಯೂರಪ್ಪ ಅವರು ಗಣನೀಯ ಕೊಡುಗೆ ನೀಡಿದ್ದಾರೆ. ವಿಮಾನ ನಿಲ್ದಾಣವನ್ನು ಛಲದಿಂದ ನಿರ್ಮಿಸಿದ್ದಾರೆ. ಹೀಗಾಗಿ ಸಚಿವ ಸಂಪುಟದಲ್ಲಿ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡುವ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಈ ಪ್ರಕ್ರಿಯೆಗೆ ಯಡಿಯೂರಪ್ಪ ಅವರು ತಡೆಯೊಡ್ಡಿದರು ಎಂದರು.

ಆದರೆ, ಅಭಿಮಾನಿಗಳ ಪ್ರೀತಿಗೆ ನಾವು ಮನ್ನಣೆ ನೀಡಲೇಬೇಕಾಗುತ್ತದೆ. ಹೀಗಾಗಿ ಯಡಿಯೂರಪ್ಪ ಅವರ ಹೆಸರನ್ನು ಅಂತಿಮಗೊಳಿಸಿ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದು ಸಿಎಂ ತಿಳಿಸಿದರು.

ಬಳಿಕ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ಅವರು,  2006ರಲ್ಲಿ ಇದ್ದ ಅಂದಿನ ಶಿವಮೊಗ್ಗಕ್ಕೂ 2023ರ ಇಂದಿನ ಶಿವಮೊಗ್ಗಕ್ಕೂ ಅಜಗಜಾಂತರ ವ್ಯತ್ಯಾಸವಿದೆ. 18 ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆ ಸರ್ವತೋಮುಖ ಅಭಿವೃದ್ಧಿ ಕಂಡಿದೆ. ನಾವು ವಿರೋಧ ಪಕ್ಷದಲ್ಲಿ ಇದ್ದಾಗ ಶಿವಮೊಗ್ಗದ ಅಭಿವೃದ್ಧಿ ನಿಂತ ನೀರಾಗಿತ್ತು. ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಪರ್ವವೇ ಆಗಿದೆ. ಇದಕ್ಕೆ ಈಶ್ವರಪ್ಪ, ಡಿ.ಎಚ್‌.ಶಂಕರಮೂರ್ತಿ ಅವರಂ​ಥ ಹಿರಿಯ ನಾಯಕರೂ ಕಾರಣ ಎಂದರು. ಪ್ರಧಾನಿ ಮೋದಿ ಅವರನ್ನು ಇಡೀ ಜಗತ್ತೆ ಮೆಚ್ಚಿಕೊಂಡಿದೆ ಎಂದರು.

SCROLL FOR NEXT