ರಾಜ್ಯ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನೌಕರರ ಪ್ರತಿಭಟನೆ: ಪಾಲಿಕೆ ಸೇವೆಯಲ್ಲಿ ವ್ಯತ್ಯಯ?

Manjula VN

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೌಕರರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಗುರುವಾರ ಪಾಲಿಕೆ ಎಲ್ಲಾ ಕಚೇರಿಗಳು ಬಂದ್ ಆಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ನಿಯಮಾವಳಿಯಂತೆ ಸಕಾಲದಲ್ಲಿ ಅಧಿಕಾರಿ, ನೌಕರರಿಗೆ ಸೌಲಭ್ಯ ಒದಗಿಸುತ್ತಿಲ್ಲ. ಪಾಲಿಕೆಯಲ್ಲಿ ವಿಲೀನಗೊಂಡಿರುವ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ. ಆರೋಗ್ಯ ಕಾರ್ಡ್ ನೀಡುವುದಾಗಿ ಹೇಳಿ ಇದೂವರೆಗೆ ನೀಡಿಲ್ಲ. ಪ್ರತಿಷ್ಟಿತ ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೌಲಭ್ಯ ಪಡೆದುಕೊಳ್ಳಲು ಆಗುತ್ತಿಲ್ಲ. ಅನಾರೋಗ್ಯಕ್ಕೆ ಒಳಗಾದಾಗ ಬಿಬಿಎಂಪಿ ಆಸ್ಪತ್ರೆಗಳು ಮಾತ್ರವಲ್ಲದೆ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ಮಾಡಿಕೊಡಬೇಕು. ಖಾಲಿ ಇರುವ ಎಲ್ಲಾ ವೃಂದದ ಮುಂಬಡ್ತಿ ನೀಡಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.

ಸಂಘದ ಅಧ್ಯಕ್ಷ ಎ ಅಮೃತರಾಜ್ ಮಾತನಾಡಿ, ನಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಬೇಡಿಕೆ ಈಡೇರಿಲ್ಲ. ಬಿಬಿಎಂಪಿ ನೌಕರರು ಆಡಳಿತ ಮತ್ತು ವೈದ್ಯಕೀಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆಡಳಿತ ಇಲಾಖೆಯಲ್ಲಿ ವಿಶೇಷ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ನಿಯೋಜನೆಯಿಂದಾಗಿ ಪಾಲಿಕೆ ಕಾರ್ಯದಲ್ಲಿ ಸಮಸ್ಯೆ ಉಂಟಾಗಿದೆ. ಆಡಳಿತದ ಹಿತದೃಷ್ಟಿಯಿಂದ ಕೂಡಲೇ ಕಾಯಂ ಅಧಿಕಾರಿಗಳನ್ನು ನೇಮಿಸಬೇಕು' ಎಂದು ಹೇಳಿದರು.

SCROLL FOR NEXT