ರಾಜ್ಯ

ಬೆಂಗಳೂರು: ಯುಕೆಜಿ ವಿದ್ಯಾರ್ಥಿ ಅನುತ್ತೀರ್ಣ, ಶಾಲೆಯಿಂದ ಸ್ಪಷ್ಟೀಕರಣ ಕೇಳಿದ ಸರ್ಕಾರ

Nagaraja AB

ಬೆಂಗಳೂರು: ಆರು ವರ್ಷದ ಯುಕೆಜಿ ವಿದ್ಯಾರ್ಥಿನಿಯನ್ನು ಅನುತ್ತೀರ್ಣಗೊಳಿಸಿದ ಬೆಂಗಳೂರಿನ ಖಾಸಗಿ ಶಾಲೆಯೊಂದರಿಂದ ರಾಜ್ಯ ಶಿಕ್ಷಣ ಇಲಾಖೆ ಸ್ಪಷ್ಟೀಕರಣ ಕೋರಿದೆ. ಪೋಷಕರು ಹಾಗೂ ಶಿಕ್ಷಣ ತಜ್ಞರು, ಶಾಲಾ ಆಡಳಿತ ಮಂಡಳಿ ವಿರುದ್ಧ 
ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು ಹೊರವಲಯ ಆನೇಕಲ್ ನ ದೀಪಹಳ್ಳಿಯಲ್ಲಿರುವ ಸೆಂಟ್ ಜೋಸೆಪ್ ಚಾಮಿನಾಡೆ ಅಕಾಡೆಮಿಯಲ್ಲಿ ಇಂತಹ ಘಟನೆ ನಡೆದಿದೆ. ಬಾಲಕಿಗೆ ನೀಡಿರುವ ಅಂಕಪಟ್ಟಿಯಲ್ಲಿ ಅನುತ್ತೀರ್ಣ ಎಂದು ಉಲ್ಲೇಖಿಸಲಾಗಿದೆ. ಒಂದು ವಿಷಯದಲ್ಲಿ ನಂದಿನಿ 40 ಅಂಕಗಳ ಪೈಕಿ ಕೇವಲ ಐದು ಅಂಕಗಳನ್ನು ಪಡೆದಿರುವುದಾಗಿ ಮಾರ್ಕ್ಸ್ ಕಾರ್ಡ್ ನಲ್ಲಿ ತೋರಿಸಲಾಗಿದೆ. 

ಶಾಲೆಯ ಆಡಳಿತ ಮಂಡಳಿ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಸಂಬಂಧಿತ ಇಲಾಖೆ ಈ ಶಾಲೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಒಂದರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಬಾರದು ಎಂದು ಕಾನೂನು ಹೇಳುತ್ತದೆ. ಈ ನಿಯಮವನ್ನು ಶಾಲಾ ಆಡಳಿತ ಮಂಡಳಿ ಗಾಳಿಗೆ ತೂರಿದೆ ಎಂದು ಅವರು ಆರೋಪಿಸಿದ್ದಾರೆ.

ಮತ್ತೊಂದೆಡೆ ಶಾಲೆ ವಿರುದ್ಧ ವಾಗ್ದಾಳಿ ನಡೆಸಿರುವ ಬಾಲಕಿಯ ಪೋಷಕರು, ಆರು ವರ್ಷದ ವಿದ್ಯಾರ್ಥಿನಿಯ ಫಲಿತಾಂಶವನ್ನು ಸರಿಯಾಗಿ ಪ್ರಕಟಿಸಿಲ್ಲ ಎಂದು ಬಾಲಕಿ ತಂದೆ ಮನೋಜ್ ಬಾದಲ್ ಹೇಳಿದ್ದಾರೆ.  ಆದರೆ, ಸಂಸ್ಥೆ ಫೇಲ್ ಮಾಡಿರುವುದಾಗಿ ಘೋಷಿಸಿಲ್ಲ. ಯೂನಿಟ್ ಟೆಸ್ಟ್ ಅಂಕಪಟ್ಟಿ ನೀಡಲಾಗಿದೆ ಎಂದು ಶಾಲೆಯ ಆಡಳಿತ ಮಂಡಳಿ ಹೇಳಿದೆ. ಈ ವಿಚಾರದ ಬಗ್ಗೆ ಬಿಇಒ ಜಯಲಕ್ಷ್ಮಿ ಶಾಲೆಯಿಂದ ಸ್ಪಷ್ಟೀಕರಣ ಕೋರಿದ್ದಾರೆ. 

SCROLL FOR NEXT